Slide
Slide
Slide
previous arrow
next arrow

‘ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇತಿಹಾಸದಲ್ಲಿ ಉಲ್ಲೇಖವಾಗದಿರುವುದು ವಿಷಾದನೀಯ’

300x250 AD

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖವಾಗದೇ ಇರುವುದು ದುರದೃಷ್ಟಕರ ಸಂಗತಿ ಎಂದು ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.

ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ, ಇತಿಹಾಸ ವೇದಿಕೆ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ರಾಜ್ಯ ಪತ್ರಾಗಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾತ್ರ ಕುರಿತ ರಾಜ್ಯ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಶಿರಸಿ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಮಾತನಾಡುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿರಸಿ ಸಿದ್ದಾಪುರ  ಇಡಿ ದೇಶದ ಗಮನ ಸೆಳೆದಿತ್ತು. ಇಲ್ಲಿಯ ಜನರು  ಅಪ್ಪಟ ರಾಷ್ಟ್ರೀಯವಾದಿಗಳಾಗಿದ್ದು ದೇಶಕ್ಕೋಸ್ಕರ ತಮ್ಮ ಮನೆ ಮಠ, ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದರು. ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಅಕ್ಷರಷಃ ಬೀದಿಪಾಲಾಗಿದ್ದೂ ಉಂಟು ಎಂದು ಅವರು ತಿಳಿಸಿದರು.

ಜಿಲ್ಲೆಯ ಉಳಿದ ಪ್ರದೇಶಗಳಂತೆ ಇಲ್ಲಯೂ ಹವ್ಯಕ ಮತ್ತು ಗೌಡ ಸಾರಸ್ವತ ಬ್ರಾಹ್ಮಣ ವರ್ಗ ಬುದ್ದಿವಂತರು ಮತ್ತು ಶಕ್ತಿವಂತ ಸಮಾಜ ಎಂಬ ಪ್ರತೀತಿಗೆ ಭಾಜನವಾಗಿತ್ತು ಎಂದ ಅವರು ಕನ್ನಡ, ಇಂಗ್ಲೀಷ್, ಮರಾಠಿ ವೃತ್ತ ಪತ್ರಿಕೆಗಳನ್ನು ಆಸಕ್ತಿಯಿಂದ ಓದಿ ಸಮಾಜದ ಇತರರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುತ್ತಿದ್ದರು ಎಂದರು. ಮಹಾತ್ಮಾ ಗಾಂಧೀಜಿ ಅವರ ಕರೆಯ ಮೇರೆಗೆ ಕರ ನಿರಾಕರಣ, ಅರಣ್ಯ ಸತ್ಯಾಗ್ರಹ, ಸ್ವದೇಶಿ, ಅಸಹಕಾರ ಚಳವಳಿಗಳಂತಹ ಉಗ್ರ ಪ್ರತಿಭಟನೆಗಳಲ್ಲಿ ಇಲ್ಲಿಯ ಜನ ಮುಂಚೂಣಿಯಲ್ಲಿದ್ದರು ಎಂದು ವಿವರಿಸಿದರು.

ಶಿರಸಿಯ ಅಕದಾಸ ಭಟ್ಟ, ಬಾಳಗಾರಿನ ಸುಬ್ಬಯ್ಯ ಹೆಗಡೆ ಜೋಗಿಮನೆ, ಕಡವೆ ರಾಮಕೃಷ್ಣ ಹೆಗಡೆ, ತಿಮ್ಮಪ್ಪ ನಾಯ್ಕ, ಬಿಸಲಕೊಪ್ಪ ಗಣಪತಿ ಭಟ್ಟ, ಸುಗಾವಿಯ ಕಷ್ಣ ಭಟ್ಟ, ಶಿರಳಗಿ ಸುಬ್ರಾಯ ಭಟ್ಡ, ಶಂಕರ ಗುಲ್ವಾಡಿ, ದೊಡ್ಮನೆ ನಾಗೇಶ ಹೆಗಡೆ, ವಾಮನ ರಾವ್ ಹೊದಿಕೆ, ಕನ್ನಳ್ಳಿ ಶಿವರಾಮ ಹೆಗಡೆ, ಬೇಡ್ಕಣಿ ಚೂಡಾ ನಾಯಕ, ಇಮಾಮ್ ಸಾಹೇಬ್ ಗೌಡಳ್ಳಿ , ಗೋಪಾಲ ಕಿಣಿ ಸೇರಿದಂತೆ ಸಾವಿರಾರು ಮುಖಂಡರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿದೆ. ನೂರಾರು ಮಹಿಳೆಯರೂ ಪುರುಷರಿಗೆ ಸಾಟಿ ಇಲ್ಲದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಇವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೆ ಈ ಭಾಗದ ಜನರಿಗೆ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು.

300x250 AD

ಶಿರಸಿ ತಾಲೂಕಿನ ಬಾಳಗಾರ ಜೋಗಿಮನೆ ಸುಬ್ಬಯ್ಯ ಹೆಗಡೆ ಅವರಂತಹ ಅನೇಕ ಅಪ್ರತಿಮ ಹೋರಾಟಗಾರರು ಈ ಭಾಗದವರಿಗೆ ಸ್ವಾತಂತ್ರ್ಯದ ಸ್ಪೂರ್ತಿಯ ಸೆಲೆಯಾಗಿದ್ದರು. ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು ತೆಗೆದುಕೊಳ್ಳದೇ ಹೋದ ಕಾರಣಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದಿರುವುದು ವಿಷಾಧಕರ ಸಂಗತಿ ಎಂದರು.

ಸ್ವಾತಂತ್ರ್ಯ ಹೋರಾಟ ಅಂತ ಬಂದಾಗ ರಾಷ್ಟ್ರ ಮಟ್ಟದಲ್ಲಿ ಕೇವಲ ಮೂರ್ನಾಲ್ಕು ಜನರ ಹೆಸರಷ್ಟೇ ಉಲ್ಲೇಖವಾಗಿತ್ತದೆ. ಈಭಾಗದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕು.   ಪಠ್ಯದಲ್ಲಿ ಇವರ ಉಲ್ಲೇಖವೂ ಬರುವಂತೆ ಸರ್ಕಾರಗಳು, ಪಠ್ಯಕ್ರಮ ರಚನೆಗಾರರು ಗಮನ ಹರಿಸಬೇಕು. ಶಿರಸಿ ತಾಲೂಕಿನ ಎಸಳೆ, ಸಿದ್ದಾಪುರದ ಬೇಡ್ಕಣಿ, ಬಿಳಗಿ, ಇಟಗಿ ಮೊದಲಾದ ಸ್ಥಳಗಳಲ್ಲಿ ಸ್ವಾತಂತ್ರ್ಯ ಸ್ಮಾರಕಗಳನ್ನು ನಿರ್ಮಿಸಿ ಪ್ರವಾಸಿ ಕೇಂದ್ರಗಳನ್ನಾಗಿಸಬೇಕು ಎಂದು ಡಾ. ಹೆಗಡೆ ಸಲಹೆ ನೀಡಿದರು. 

ಡಾ.ಶಿವಾನಂದ ನಾಯಕ, ಶ್ಯಾಮಸುಂದರ ಗೌಡ, ಡಾ.ಭಾಗ್ಯಶ್ರೀ ನಾಯಕ, ಪ್ರೊ.ರತ್ನಮ್ಮ ತಮ್ಮ ಪ್ರಬಂಧ ಮಂಡಿಸಿದರು.  ಸಮ್ಮೇಳನದ ಸಂಚಾಲಕ ಪ್ರೊ.ಪ್ರಮೋದ ಹೆಗಡೆ, ಪ್ರಾಂಶುಪಾಲರಾದ ಪ್ರೊ.ವಿಜಯಾ ಡಿ.ನಾಯಕ, ಪ್ರೊ.ಕೃಷ್ಣ ನಾಯಕ ಮೊದಲಾದವರಿದ್ದರು.

Share This
300x250 AD
300x250 AD
300x250 AD
Back to top