ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕ್ರೀಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಳೆ ದಾಂಡೇಲಿಯ ಸೆಂಟ್ ಅಂತೋನಿ ಚರ್ಚಿನ ಧರ್ಮಗುರುಗಳಾದ ರೆ.ಫಾ. ಫೆಲಿಕ್ಸ್ ಲೋಬೋ ಉದ್ಘಾಟಿಸಿ ಮಾತನಾಡುತ್ತಾ, ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ನಮ್ಮೆಲ್ಲ ಸಾಧನೆಗೆ ನಮ್ಮ ಆರೋಗ್ಯ ಸದೃಢವಾಗಿರಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವರ್ಧನೆಗೆ ಕ್ರೀಡೆ ಸಹಕಾರಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟೋ ಚಟುವಟಿಕೆಗಳಲ್ಲಿಯೂ ಕೂಡ ಸಕ್ರಿಯರಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ನಗರದ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಸೆಂಟ್ ಮೈಕಲ್ ಆಂಗ್ಲ ಮಾಧ್ಯಮ ಶಾಲೆಯ ಕೊಡುಗೆ ಅಪಾರವಾಗಿದೆ. ಶಿಸ್ತು ಮತ್ತು ಇಲ್ಲಿನ ಶೈಕ್ಷಣಿಕ ಗುಣಮಟ್ಟವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರು.
ನಗರಸಭೆಯ ಸದಸ್ಯರಾದ ನರೇಂದ್ರ ಚೌವ್ಹಾಣ್ ಅವರು ಮಾತನಾಡಿ, ಮಕ್ಕಳು ಮೊಬೈಲ್ನಲ್ಲಿ ಸಮಯ ಹರಣ ಮಾಡುವುದನ್ನು ಬಿಟ್ಟು ಪ್ರತಿದಿನವೂ ಒಂದಿಷ್ಟು ಹೊತ್ತು ಸೂರ್ಯನ ಬಿಸಿಲಿನಲ್ಲಿ ಆಟೋಟ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಹಾಗಾದಾಗ ಮಾತ್ರ ಆರೋಗ್ಯದ ಜೊತೆಗೆ ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ ಎಂದರು.
ಪಾಲಕರ ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಪ್ರೇಮವನ್ನು ಮೆರೆಯಬೇಕೆಂದು ಕರೆ ನೀಡಿದರು. ದಾಂಡೇಲಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಿ.ಆರ್.ಪಿ ಲಲಿತಾ ಬಾಂದೇಕರ ಮಾತನಾಡಿ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿರುವ ಶಿಸ್ತು ಮತ್ತು ಗುಣಮಟ್ಟದ ಕಲಿಕಾ ವಿಧಾನವೇ ಈ ಶಾಲೆಯ ಉನ್ನತಿಗೆ ಬಹುಮೂಲ್ಯ ಕಾರಣ ಎಂದರು.
ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಲಾರೆಟ್ ಶಾಲೆಯ ಪ್ರಗತಿಗೆ ಮತ್ತು ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಶಾಲೆಯ ಕರೆಸ್ಪಾಂಡೆಂಟ್ ಸಿಸ್ಟರ್ ವೀಣಾ ಬಿ.ಎಸ್, ಇಂಚಾರ್ಜ್ ಮುಖ್ಯೋಪಾಧ್ಯಾಯನಿ ವಿನಿತಾ ಡಯಾಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರನ್ನು ಹಾಗೂ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗಮನ ಸೆಳೆದ ಶಾಲೆಯ ಕ್ರೀಡಾಪಟು ದೃಷ್ಟಿ ನಕುಲ್ ಕಾಮತ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿ ಗೌತಮ್ ಗಣೇಶ ಕಾಮತ್ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶಿಕ್ಷಕಿ ಜೊಸ್ಪಿನಾ ಸ್ವಾಗತಿಸಿದರು. ಸನವ್ಹಾಜ್ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾ ಡಯಾಸ್ ಮತ್ತು ಜೂಲೀಯಾನ ಕ್ರಿಸ್ಟಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.