ಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಇದರಲ್ಲಿ ಗ್ರಾಮ ಪಂಚಾಯತ ಸದಸ್ಯರ ಹಸ್ತಕ್ಷೇಪ ಇದೆ ಎಂದು ಕರುನಾಡ ವಿಜಯಸೇನೆ ಸುಳ್ಳು ಆರೋಪ ಮಾಡಿದ್ದಾರೆ. ನಾವೆಲ್ಲಾ ಇದನ್ನು ಖಂಡಿಸುತ್ತೇವೆ ಎಂದು ಸಾಲಕೋಡ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಕರುನಾಡ ವಿಜಯಸೇನೆ ಸಂಘಟನೆ ಕೆಲದಿನಗಳ ಹಿಂದೆ ಸಾಲ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಾಮಗಾರಿಯಲ್ಲಿ ಅಸಮರ್ಪಕ ಕಾಮಗಾರಿ ಹಾಗೂ ಭ್ರಷ್ಟಾಚಾರ ನಡೆಸಿದ್ದು,ಇದರಲ್ಲಿ ಗ್ರಾಮ ಪಂಚಾಯತ ಸದಸ್ಯರು ಭಾಗಿಯಾಗಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ ಹಿನ್ನಲೆ ಈ ಬಗ್ಗೆ ಸಾಲಕೋಡ ಗ್ರಾಮ ಪಂಚಾಯತನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಾಲಚಂದ್ರ ನಾಯ್ಕ,ಸದಸ್ಯರಾದ ರಜನಿ ನಾಯ್ಕ ಪ್ರತಿಕ್ರಿಯಿಸಿದರು.
ಕಾಮಗಾರಿ ಮುಗಿದಿದ್ದರು ಪಂಚಾಯತದಿಂದ ಅಪ್ರೂವಲ್ ಕೊಟ್ಟಿಲ್ಲ.2021-22 ನೇ ಸಾಲಿನ ಬ್ಯಾಚ್ -2 ಜೆಜೆಎಮ್ ಯೋಜನೆ ಅಡಿ ಆದ ಕಾಮಗಾರಿಯಿಂದ 50,000 ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರದ ಮೂಲಕ 51 ಮನೆಗಳಿಗೆ ನೀರಿನ ಸಂಪರ್ಕ ಆಗಿತ್ತು. ಟ್ರಯಲ್ ರನ್ ವೇಳೆ ಏಕಕಾಲದಲ್ಲಿ 51 ಮನೆಗಳಿಗೆ ನೀರು ಪೂರೈಕೆ ಆಗದ ಕಾರಣ ಹಾಗೂ 13 ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವುದು ಬಾಕಿ ಇರುವುದರಿಂದ ಬೋರವೆಲ್ ನೀರನ್ನು ನೇರವಾಗಿ ಪಂಪಿಂಗ್ ಮೂಲಕ ಸಂಪರ್ಕ ಮಾಡಿರುವ ಬಗ್ಗೆ ತಿಳಿಸಿದರು.ಅಧಿಕಾರಿಗಳ ಲೋಪದಿಂದ ಅಸಮರ್ಪಕ ಕಾಮಗಾರಿ ಆಗಿದ್ದು, ಗ್ರಾಮ ಪಂಚಾಯತ ಸದಸ್ಯರ ಅಭಿಪ್ರಾಯವನ್ನು ಲೆಕ್ಕಿಸದೇ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತ ಸದಸ್ಯ ಸಚೀನ್ ನಾಯ್ಕ ಮಾತನಾಡಿ,ಈ ಯೋಜನೆಯಲ್ಲಿ ಪಂಚಾಯತ ಸದಸ್ಯರ ಹಸ್ತಕ್ಷೇಪ ಇಲ್ಲ.ಯಾರಾದರು ಸದಸ್ಯರ ಹಸ್ತಕ್ಷೇಪದ ಮಾಹಿತಿ ಇದ್ದರೆ ಕರುನಾಡ ವಿಜಯಸೇನೆ ಸಂಘಟನೆಯವರು ನೇರವಾಗಿ ಹೆಸರು ಹೇಳಬೇಕು.41 ಲಕ್ಷ ಬಿಲ್ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಪಂಚಾಯತಕ್ಕೆ ಹ್ಯಾಂಡ್ ಒವರ್ ಮಾಡುವಾಗ ನೀರು ಸಮರ್ಪಕ ಆಗಿರದ ಬಗ್ಗೆ ಪಂಚಾಯತ ವತಿಯಿಂದ ತಡೆ ಹಾಕಿದ್ದರು.ಇದುವರೆಗೆ ಕಾಮಗಾರಿ ವಿವರವು ನೀಡಿಲ್ಲ ಎಂದರು.
ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷೆ ಯಮುನಾ ನಾಯ್ಕ,ಸಚೀನ್ ನಾಯ್ಕ,ಅಪ್ಪಿ ಭಟ್, ಆಶಾ ಮಡಿವಾಳ,ಗಣಪತಿ ಭಟ್,ಪಾತ್ರೊನ್ ಮೆಂಡಿಸ್,ಲಕ್ಷ್ಮೀ ಮುಕ್ರಿ ಉಪಸ್ಥಿತರಿದ್ದರು.