ದಾಂಡೇಲಿ : ನಗರದ ರೋಟರಿ ಕ್ಲಬ್ ಆಶ್ರಯದಡಿ ಜನತಾ ವಿದ್ಯಾಲಯದ ರಾಮರೆಡ್ಡಿ ಸಭಾಭವನದಲ್ಲಿ ಅಂತರ ಜಿಲ್ಲಾ ಚೆಸ್ ಪಂದ್ಯಾವಳಿಗೆ ಭಾನುವಾರ ಚಾಲನೆಯನ್ನು ನೀಡಲಾಯಿತು.
ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಶಿರಸಿಯ ಭಟ್ ಚೆಸ್ ಶಾಲೆಯ ಮುಖ್ಯಸ್ಥರಾದ ರಾಮಚಂದ್ರ ಹೆಗಡೆ ಅವರು ಚೆಸ್ ಒಂದು ಮೆದುಳಿನ ಆಟವಾಗಿದೆ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟವಾಗಿದ್ದು, ಮಕ್ಕಳ ಮಾನಸಿಕ ಸದೃಢತೆಗೆ ಅತ್ಯಂತ ಪರಿಣಾಮಕಾರಿಯಾದ ಆಟವಾಗಿದೆ ಎಂದರು.
ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ ರೋಟರಿ ಕ್ಲಬ್ ಪ್ರತಿವರ್ಷವೂ ಅಂತರ ಜಿಲ್ಲಾ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯೂ ಈ ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ರೋಟರಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಅಶುತೋಷ ಕುಮಾರ್ ರಾಯ್ ಚೆಸ್ ಒಂದು ಜನಪ್ರಿಯ ಕ್ರೀಡೆಯಾಗಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅತಿ ಉಪಯುಕ್ತವಾದ ಆಟವಾಗಿದೆ ಎಂದರು.
ರೋಟರಿ ಕ್ಲಬ್ಬಿನ ಖಜಾಂಚಿ ಲಿಯೋ ಪಿಂಟೋ, ರೋಟರಿ ಕ್ಲಬಿನ ಇವೆಂಟ್ ಚೇರ್ಮನ್ ನವೀನ್ ಕಾಮತ್, ರೋಟರಿ ಕ್ಲಬ್ಬಿನ ಪ್ರಮುಖರಾದ ರಾಜೇಶ ತಿವಾರಿ, ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ, ಶಿಕ್ಷಕರಾದ ಜಯದೇವ ಸಿರಿಗೆರೆ, ಭಟ್ ಚೆಸ್ ಶಾಲೆಯ ಆನಂದಸ್ವಾಮಿ, ಸುರೇಶ ಕಟಿಗೆ ಸಂದರ್ಭೋಚಿತವಾಗಿ ಮಾತನಾಡಿ ಸ್ಪರ್ಧೆಗೆ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು, ಚೆಸ್ ಸ್ಪರ್ಧಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಐದು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 70 ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.