Slide
Slide
Slide
previous arrow
next arrow

ಎಲ್ಲರಿಗೂ ಸದಾ ಒಳಿತು ಬಯಸುವ ಹವ್ಯಕ ಸಂಘಟನೆ ಬಲಗೊಳ್ಳಬೇಕಿದೆ: ಶಿವಾನಂದ ಹೆಗಡೆ

300x250 AD

ಹೊನ್ನಾವರ : ಹವ್ಯಕ ಎಂಬುದೇ ಒಂದು ಆತ್ಮೀಯತೆ. ಹವ್ಯಕ ಎಂಬುದು ಸ್ವಾಭಿಮಾನ. ಹವ್ಯಕ ಎಂಬುದು ಒಂದು ಶಕ್ತಿ. ನಾವು ಹವ್ಯಕರು ಎಂಬುದೇ ನಮ್ಮ ಹೆಮ್ಮೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.

ಅವರು ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತಾಲೂಕಿನ ಎಸ್.ಡಿ.ಎಂ ಕಾಲೇಜಿನಲ್ಲಿ ರವಿವಾರ ನಡೆದ ‘ಪ್ರತಿಬಿಂಬ’ ಕಾರ್ಯಕ್ರಮದ ಆತಿಥ್ಯ ವಹಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಹವ್ಯಕರಿಗೆ ಅವರದ್ದೇ ಆದ ಸಂಸ್ಕಾರವಿದೆ. ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಅವರು ಸದಾ ಕಾರ್ಯ ಪ್ರವೃತ್ತರಾಗಿರುತ್ತಾರೆ. ದೇಶ ವಿದೇಶದಲ್ಲಿ ಇದ್ದರೂ ತಮ್ಮದೇ ಆದ ಸಂಸ್ಕಾರವನ್ನು ಉಳಿಸಿಕೊಂಡು ಬಂದಿರುವ ಪರಂಪರೆ ಹವ್ಯಕರದ್ದು. ಹವ್ಯಕರ ಭಾಷೆಗೆ ಅತ್ಯಂತ ಮಹತ್ವವಿದ್ದು ನಾವು ಯಾವುದೇ ಕಡೆಗಳಲ್ಲಿ ಇದ್ದರೂ ಹವ್ಯಕ ಭಾಷೆಯನ್ನು ಕೇಳಿದರೆ ನಮಗೆ ಸಂತಸವೆನಿಸುತ್ತದೆ. ಹವ್ಯಕ ಸಮಾಜ ಎಲ್ಲ ಸಮಾಜಕ್ಕೆ ಒಳಿತು ಮಾಡುವ ಕಾರ್ಯವನ್ನು ಮಾಡುತ್ತಿದ್ದರೂ ನಿರಂತರವಾಗಿ ಸಮಾಜದ ಮೇಲೆ ಆಕ್ರಮಣ ನಡೆದುದ್ದನ್ನು ನಾವು ಕಾಣಬಹುದು. ಹೀಗಾಗಿ ಹವ್ಯಕ ಸಂಘಟನೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕು. ಹವ್ಯಕ ಸಮಾಜ ರಾಜಕೀಯವಾಗಿ ಇನ್ನು ಸಬಲವಾಗಬೇಕು. ನಮ್ಮ ಗಟ್ಟಿತನವನ್ನು ನಾವು ತೋರಿಸಬೇಕು ಎಂದರೆ ಹವ್ಯಕ ಸಮಾಜದ ಸಂಖ್ಯೆ ಹೆಚ್ಚಾಗಬೇಕು. ಇಂದಿನ ಯುವ ಪೀಳಿಗೆ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ನಾರಾಯಣ ಯಾಜಿ ಸಾಲೆಬೈಲ್ ಹವ್ಯಕರೆಂದರೆ ಪ್ರತಿಭೆಗಳ ಪುಂಜ. ಹವ್ಯಕರ ಪ್ರತಿಬಿಂಬ ಇದು. ಹವ್ಯಕತನದ ಬಿಂಬ ಪ್ರತಿಫಲಿಸಬೇಕು ಎಂದರು.

ಭಟ್ಕಳ ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭು ಹೆಗಡೆ ಮಾತನಾಡಿ, ಹವ್ಯಕರು ಎಂದರೆ ಹತ್ತಾರು ಪ್ರತಿಭೆಗಳನ್ನು ಹೊಂದಿದವರು. ಆದರೆ ಅವರ ಪ್ರತಿಭೆಗಳನ್ನು ಅವರು ಗುರುತಿಸಿಕೊಳ್ಳುವಲ್ಲಿ ಹಿಂದಿದ್ದಾರೆ. ಅದೆಷ್ಟೋ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರು ಸಹ ತಮ್ಮನ್ನು ತಾವು ಎಲ್ಲಿಯೂ ತೋರ್ಪಡಿಸಿಕೊಳ್ಳದೆ, ತಮ್ಮ ಕಾರ್ಯವನ್ನು ಮಾಡಿದವರು. ನಮ್ಮ ತಂದೆಯವರು ಸಹ ಸುಮಾರು 125ಕ್ಕೂ ಅಧಿಕ ಪುಸ್ತಕವನ್ನು ಬರೆದಿದ್ದರೂ, ಅವುಗಳನ್ನು ಪರಿಚಯಿಸಿಕೊಳ್ಳುವ ಕಾರ್ಯ ಮಾಡಿಲ್ಲ ಎಂದ ಅವರು, ಹವ್ಯಕರು ತಮ್ಮನ್ನು ತಾವು ಗುರುತಿಸಿಕೊಂಡು ಹೆಮ್ಮೆಯಿಂದ ಸೇರುವಂಥ ಆಗಬೇಕು ಎಂದರು.

ಶ್ರೀ ಅಖಿಲ‌ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಮಾತನಾಡಿ, ಹವ್ಯಕರೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ತೃತೀಯ ಹವ್ಯಕ ಸಮ್ಮೇಳನ ಹವ್ಯಕರ ದೊಡ್ಡ ಹಬ್ಬವಾಗಿದ್ದು, ನಮ್ಮ ಒಗಟನ್ನು ತೋರ್ಪಡಿಸಲು ಒಂದು ವೇದಿಕೆ ಆಗಲಿದೆ. ಹತ್ತಾರು ವಿಶೇಷತೆಗಳನ್ನು ಹೊಂದಿರುವ ಹವ್ಯಕ ಸಮಾಜವು ಇತರ ಸಮಾಜದ ಜೊತೆಗೆ ಬದುಕುವ ಜೊತೆಗೆ ನಮ್ಮ ವಿಶೇಷತೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಗಳನ್ನು ಮಾಡುತ್ತಿರೋಣ ಎಂದರು.

300x250 AD

ಶ್ರೀ ಅಖಿಲ‌ ಹವ್ಯಕ ಮಹಾಸಭಾದ ಪ್ರಾಂತ ಪ್ರತಿನಿಧಿ ಅರುಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಪ್ರತಿಬಿಂಬದ ಆಶಯವನ್ನು ವಿವರಿಸಿದರು. ಅಖಿಲ ಹವ್ಯಕ ಮಹಾಸಭಾ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಇಂದು ಮೂವತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸದಸ್ಯತ್ವವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅವರು ವಿನಂತಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಶಿವಮೂರ್ತಿ ಭಟ್ ಅಳವಳ್ಳಿ (ಶಿಲ್ಪಕಲೆ) ತಿಮ್ಮಣ್ಣ ಜಿ. ಹೆಗಡೆ ಮಾಗೋಡು (ಕ್ರೀಡೆ) ಶಾಂತಾ ವಸಂತ್ ಭಟ್ ಕರ್ಕಿ.( ಗೋಪಾಲನೆ) ಶ್ರೀಧರ್ ಹೆಬ್ಬಾರ್ ಮಾರುಕೇರಿ (ಕೃಷಿ) ರಾಧಾಕೃಷ್ಣ ಭಟ್ ಭಟ್ಕಳ ( ಪತ್ರಿಕೋದ್ಯಮ) ಸುಬ್ರಾಯ ರಾಮಕೃಷ್ಣ ಭಟ್ ಬೆಕ್ಕುತ್ತೆ (ಅಡುಗೆ) ಎಸ್ ಎಂ ಪಂಡಿತ್ ವಕೀಲರು ಕಾರವಾರ (ಕಾನೂನು) ಶ್ರೀರಾಮಚಂದ್ರ ಭಟ್ ಅಚವೆ (ವೈದಿಕ) ಎಂ. ಎಂ. ಹೆಗಡೆ ಅಳವಳ್ಳಿ (ಪಾಕ ವಿದ್ಯೆ) ಇವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗದಲ್ಲಿ ನಡೆದ ೧೫ ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ಬಹುಮಾನ ನೀಡಲಾಯಿತು.

ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಎಂ.ಪಿ ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಹಾಗೂ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯ ಡಿ.ಎಲ್. ಹೆಬ್ಬಾರ್ ಉಪಸ್ಥಿತರಿದ್ದರು.

ಪ್ರಾಂತ ಸಂಚಾಲಕ ಆರ್. ಜಿ. ಹೆಗಡೆ, ಪ್ರತಿಬಿಂಬದ ಸಂಚಾಲಕರುಗಳಾದ ಸತೀಶ ಭಟ್ಟ, ಎಂ.ವಿ ಹೆಗಡೆ ಸಹಕರಿಸಿದರು. ಈಶ್ವರ ಭಟ್ಟ ನಿರೂಪಿಸಿದರು. ಎಸ್.ವಿ ಹೆಗಡೆ ವಂದಿಸಿದರು. ಕೇಶವ ಕಿರಣ, ವಿನು ಮಧ್ಯಸ್ಥ ಸಹಕರಿಸಿದರು.

Share This
300x250 AD
300x250 AD
300x250 AD
Back to top