ಸಿದ್ದಾಪುರ: ಆರಾಧನಾ ಕಲೆಗಳ ವಾಣಿಜ್ಯೀಕರಣ ಅತಿಯಾದರೆ ಅವುಗಳ ಅವನತಿಗೂ ಕಾರಣ ಆಗಬಹುದು ಎಂದು ವಸುಂಧರಾ ಸಮೂಹ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಕಲಾವಿದ ಆರ್.ಟಿ.ಭಟ್ಟ ಕಬ್ಗಾಲ ಅಭಿಪ್ರಾಯ ಪಟ್ಟರು.
ಅವರು ಶ್ರೀ.ಷ.ಬ್ರ.ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ಶಾಂತಪುರ ಸೊರಬ ಇವರ ಪೂರ್ಣಾಶೀರ್ವಾದದೊಂದಿಗೆ ಐತಿಹಾಸಿಕ ಸುಪ್ರಸಿದ್ಧ ನಿಲ್ಕುಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸಮಾರಾಧನೆ ಮತ್ತು ದೀಪೋತ್ಸವದಲ್ಲಿ ಜರುಗಿದ ಶ್ರೀವೀರ ಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿ ಹೆಗ್ಗರಣಿ ಇವರಿಂದ ಕಲಾವಿದರಿಗೆ ಸನ್ಮಾನ ಹಾಗೂ ಬಯಲಾಟ ಉದ್ಘಾಟಿಸಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಮುಂದುವರಿದು, ಯಕ್ಷಗಾನ ಕೇವಲ ಮನರಂಜನಾ ಕಲೆ ಆಗಿರದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಆರಾಧನಾ ಕಲೆಯಾಗಿದೆ. ಲಾಭ ಗಳಿಸುವ ಏಕೈಕ ಉದ್ದೇಶದಿಂದಲೇ ಪ್ರದರ್ಶನ ನೀಡುವಲ್ಲಿ ತಂಡಗಳು ನಡುವೆ ಪೈಪೋಟಿ ನಡೆದರೆ ಯಕ್ಷಗಾನದ ಮೂಲ ಸತ್ವ ಕಳೆದುಕೊಳ್ಳುವ ಅಪಾಯ ಇಲ್ಲದಿಲ್ಲ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ನಿಲ್ಕುಂದ ಗ್ರಾಮ ಪಂಚಾಯಿತ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ಲ ಮಾತನಾಡಿ ಯಕ್ಷಗಾನಕ್ಕೆ ರಘುಪತಿ ನಾಯ್ಕರ ಕೊಡುಗೆ ಸಾಕಷ್ಟಿದ್ದು ತಾನೂ ಬೆಳೆಯುತ್ತಾ ಉಳಿದ ಕಲಾವಿದರನ್ನು ಗೌರವಿಸುವ ಅವರ ಆದರ್ಶ ಗುಣಗಳನ್ನು ಶ್ಲಾಘಿಸಿದರು.
ಇನ್ನೋರ್ವ ಅತಿಥಿ ಗ್ರಾಮ ಪಂಚಾಯಿತ ತಂಡಾಗುಂಡಿ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಗೌಡ ಬಿಳೆಕಲ್ಲಮನೆ ಮಾತನಾಡಿ ಯಕ್ಷಗಾನದಂತೆ ಸಂಸ್ಕಾರ ನೀಡುವ ಕಲೆ ಇನ್ನೊಂದಿಲ್ಲ.ಸರ್ಕಾರದಿಂದ ಈ ಕಲೆಗೆ ಹೆಚ್ಚಿನ ಆದ್ಯತೆ ದೊರಕುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ನೀರಾವರಿ ಬಾವಿಗಳನ್ನು ತೊಡಿಸದ ಕಾಯಕಯೋಗಿ, ಯಕ್ಷಗಾನ ಕಲಾವಿದ ಮಂಜುನಾಥ ತಿಮ್ಮ ಗೌಡ ಅರೆಹಳ್ಳ ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು .
ಟಿಎಮ್ಎಸ್ ಶಿರಸಿ ನಿರ್ದೇಶಕ ರತ್ನಾಕರ ನಾಯ್ಕ ಬಬ್ಬೀಸರ , ಟಿಎಸ್ಎಸ್ ನಿರ್ದೇಶಕ ವೀರೇಂದ್ರ ಗೌಡರ್ ಹುಲೇಕಲ್ಲ , ಎಸ್ಡಿಎಮ್ಸಿ ಅಧ್ಯಕ್ಷ ಪರಶುರಾಮ ಗೌಡ ಇವರೆಲ್ಲ ಉಪಸ್ಥಿತರಿದ್ದು ಶುಭ ಹಾರೈಸಿದರು.ಮಂಜುನಾಥ ಗೌಡರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ದೇವಸ್ಥಾನದ ಧರ್ಮದರ್ಶಿ ಪ್ರವೀಣ ಗೌಡರ್ ತೆಪ್ಪಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮುಂದಿನ ದಿನಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಯಕ್ಷಗಾನ ತರಬೇತಿ ದೊರಕುವಂತಾಗಲೆಂದು, ದಕ್ಷಿಣ ಕನ್ನಡ ಜಿಲ್ಲೆಯಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ಯಕ್ಷಗಾನ ಆಡಿಸುವಲ್ಲಿ ಹೆಚ್ಚು ಕಾರ್ಯೋನ್ಮುಖರಾಗಲೆಂದು ಹಾರೈಸಿದರು.
ಮೇಳದ ಸಂಚಾಲಕ ಕಲಾರಾಧಕ ರಘುಪತಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಹೆಗ್ಗರಣಿ ಸ್ವಾಗತಿಸಿದರು.ಆನಂದ ನಾಯ್ಕ ಸನ್ಮಾನ ಪತ್ರ ವಾಚಿಸಿದರು ನಾಗಪತಿ ಗೌಡ ಹುತ್ಗಾರ ಕಾರ್ಯಕ್ರಮ ನಿರೂಪಿಸಿದರು.
ನಂತರ ವೀರ ಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿ ಹೆಗ್ಗರಣಿ ಇವರಿಂದ ದಕ್ಷ ಯಜ್ಞ ಯಕ್ಷಗಾನ ಹರಕೆ ಆಟ ಜರುಗಿತು.ಹಿಮ್ಮೇಳದಲ್ಲಿ ಆರ್.ಜಿ.ಹೆಗಡೆ ಕುಮಟಾ, ಎಂ.ಪಿ.ಹೆಗಡೆ ಹುಲ್ಲಾಳಗದ್ದೆ ,ವಿಠಲ ಪೂಜಾರಿ ಮಂಚಿಕೇರಿ, ಗಂಗಾಧರ ಹೆಗಡೆ ಕಂಚಿಮನೆ ಭಾಗವಹಿಸಿ ಹಿಮ್ಮೇಳವನ್ನು ರಂಜಿಸಿದರು. ಮುಮ್ಮೇಳದಲ್ಲಿ ಯಕ್ಷಾರಾಧಕ ರಘುಪತಿ ನಾಯ್ಕ, ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ, ವಿನಾಯಕ ಮಾವಿನಕಟ್ಟಾ, ಮಂಜು ನಾಯ್ಕ ಕುಮಟಾ, ಶ್ರೀವತ್ಸ ಹೆಗ್ಗರಣಿ, ಕುಮಾರ್ ಗಣೇಶ ಇವರೆಲ್ಲ ಭಾಗವಹಿಸಿ ಸಮರ್ಥವಾಗಿ ಪಾತ್ರ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾದರು.