ಹೊನ್ನಾವರ : ಸರ್ಕಾರ ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಂಜೀವಿನಿ ಮಾಸಿಕ ಸಂತೆಯಂತಹ ಕಾರ್ಯಕ್ರಮ ನಡೆಸುತ್ತಿದೆ. ಸ್ವಸಹಾಯ ಸಂಘದ ಸದಸ್ಯರಿಗೆ ಇದು ಉಪಯುಕ್ತವಾಗಿದ್ದು, ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡದಂತಾಗುತ್ತಿದೆ ಎಂದು ತಾ.ಪಂ. ಸಹಾಯಕ ನಿರ್ದೇಶಕರಾದ ಕಿರಣ್‌ಕುಮಾರ್ ಎಂ.ಜಿ. ಹೇಳಿದರು.
ಅವರು ಕವಲಕ್ಕಿಯಲ್ಲಿ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ ಮತ್ತು ಮಯೂರ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಮುಗ್ವಾ ಆಶ್ರಯದಲ್ಲಿ ಆಯೋಜನೆ ಮಾಡಿದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಗ್ವಾ ಗ್ರಾ. ಪಂ. ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ಸ್ವಸಹಾಯ ಸಂಘದ ಸದಸ್ಯರು ಉತ್ತಮ ರೀತಿಯಲ್ಲಿ ಸಂತೆ ಆಯೋಜಿಸಿದ್ದು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಊರಿನ ಜನರು ವಸ್ತುಗಳನ್ನು ಖರೀದಿಸುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
25 ಕ್ಕೂ ಅಧಿಕ ಸ್ವ ಸಹಾಯ ಸಂಘಗಳಿಂದ ವಿವಿಧ ರೀತಿಯ ಆಹಾರ ಉತ್ಪನ್ನಗಳು, ಕಸೂತಿ ಕೃತಕಭರಣ, ತಂಪು ಪಾನೀಯಗಳು ಸೇರಿದಂತೆ ಹಲವು ಉತ್ಪನ್ನಗಳು ಸಂತೆಯಲ್ಲಿದ್ದವು. ಎನ್ಆರ್‌ಎಲ್ಎಂ ತಾಲೂಕು ವ್ಯವಸ್ಥಿತವಾಗಿ ಸಂತೆಯನ್ನು ಆಯೋಜಿಸಿದ್ದವು. ತಾಲೂಕ ಪಂಚಾಯತ ಸಿಬ್ಬಂದಿ ಬಾಲಚಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.