ಹೊನ್ನಾವರ : ಕನ್ನಡ- ಇಂಗ್ಲಿಷ್ ಉಭಯ ಭಾಷೆಗಳು, ಸಾವಿರಾರು ವರ್ಷಗಳ ಪ್ರಾಚೀನತೆಯ ಇತಿಹಾಸವನ್ನು ಹೊಂದಿದ್ದು, ಕನ್ನಡ ಹಾಗೂ ಇಂಗ್ಲಿಷ್ ನಡುವಿನ ಸಂಕರ ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಕೋಟ್ಯಂತರ ಜನರು ಮಾತನಾಡುವ ಪ್ರಾಚೀನ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಇಂಗ್ಲಿಷ್ ಅಥವಾ ಇನ್ನಾವುದೇ ಅನ್ಯ ಭಾಷೆಗಳಿಂದ ಅಪಾಯ ಎದುರಾಗಿದೆ ಎನ್ನುವುದು ಒಂದು ತಪ್ಪು ಕಲ್ಪನೆ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪಿ.ಕಣ್ಣನ್ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗ, ಐಕ್ಯುಎಸಿ ಹಾಗೂ ಕವಿವಿ ಇಂಗ್ಲಿಷ್ ಶಿಕ್ಷಕರ ಸಂಘದ ಆಶ್ರಯದಲ್ಲಿ ‘ಕನ್ನಡಿಗರ ನಡುವೆ ಇಂಗ್ಲಿಷ್ ಭಾಷೆ’ ಕುರಿತು ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಚಾರ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ವೆಂಕಟರಾಜ.ಕೆ.ಜಿ. ಮಾತನಾಡಿ, ‘ಸಮುದಾಯವನ್ನು ಪ್ರತಿನಿಧಿಸುವ ಮಾಧ್ಯಮದಲ್ಲಿ ಜನರ ನಡುವೆ ಪ್ರಚಲಿತವಿರುವ ಇತರ ಭಾಷೆಗಳ ಶಬ್ದಗಳೂ ಉಪಯೋಗಿಸಲ್ಪಟ್ಟು ಭಾಷೆಯ ವ್ಯಾಪ್ತಿ ವಿಸ್ತರಿಸುತ್ತದೆ’ ಎಂದು ಹೇಳಿದರು.
ಅನುವಾದಕ ಕಮಲಾಕರ ಭಟ್ಟ ಗೋಷ್ಠಿಯೊಂದರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಜಿ.ಕೆ.ಬಡಿಗೇರ ಧಾರವಾಡ, ಲೋಕೇಶ ಹೆಗಡೆ ಕುಮಟಾ, ಪ್ರಾಚಾರ್ಯೆ ಸಂಧ್ಯಾ ಕುಲಕರ್ಣಿ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಂ.ಪಿ.ಇ.ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ,ಹೊನ್ನಾವರ ಫೌಂಡೇಷನ್ ಟ್ರಸ್ಟಿ ಸಂದೀಪ ಹೆಗಡೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಿ.ಎಲ್. ಹೆಬ್ಬಾರ ಮಾತನಾಡಿದರು. ಕವಿವಿ ಇಂಗ್ಲಿಷ್ ಶಿಕ್ಷಕರ ಸಂಘದ ಖಜಾಂಚಿ ಎಂ.ಕೆ.ಅಂಗಡಿ ಉಪಸ್ಥಿತರಿದ್ದರು.
ಗದಗ ಜೆಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಬೌರವ್ವ ಚಿನಗುಂಡಿ ಎರಡು ದಿನಗಳ ಕಾರ್ಯಕ್ರಮದ ಅವಲೋಕನ ನಡೆಸಿ ಸಮಗ್ರ ವರದಿಯನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕಿ ಕೆ.ಆರ್.ಶ್ರೀಲತಾ ಪ್ರಾರ್ಥನಾ ಗೀತೆ ಹಾಡಿದರು. ಐಕ್ಯುಎಸಿ ಸಂಚಾಲಕ ಸುರೇಶ ಎಸ್.ಸ್ವಾಗತಿಸಿದರು. ಉಪನ್ಯಾಸಕಿ ಪ್ಲೋಸಿ ಫರ್ನಾಂಡೀಸ್ ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಂ.ಜಿ.ಹೆಗಡೆ ವಂದಿಸಿದರು.
ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಪ್ರಬಂಧ ಮಂಡಿಸಿದರು.