ಭಟ್ಕಳ: ಭಟ್ಕಳ ನಗರ ಭಾಗದಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿಗಳಿಗೆ ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಮಾತ್ರ ಮಾಡದೇ ಜನರಿಗೆ ಸುಳ್ಳು ಭರವಸೆ ಕೊಡುತ್ತಾ ಭಟ್ಕಳವನ್ನು ಅಸ್ವಸ್ಥ ನಗರವನ್ನಾಗಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶನಿವಾರದಂದು ಸಹಾಯಕ ಆಯುಕ್ತರಿಗೆ ಡಬ್ಲೂ.ಎಚ್.ಆರ್.ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಮತ್ತು ತಾಲೂಕಾ ಘಟಕದಿಂದ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ನವೆಂಬರ್ 24 2022 ರಂದು ಸುಮಾರು 8 ಕೋಟಿ ನಗರೋತ್ಥಾನ ಕಾಮಗಾರಿಯ ಪ್ರತಿಯನ್ನು ಸಿದ್ಧಪಡಿಸಿ, ಕುಂದಾಪುರ ಮೂಲದ ಗುತ್ತಿಗೆದಾರ ನಾಗಯ್ಯ ಶೆಟ್ಟಿ ಎನ್ನುವವರಿಗೆ ಭಟ್ಕಳ ಪುರಸಭೆಯು ಡಿಸೆಂಬರ್ 26 2022 ರಂದು ಕಾಮಗಾರಿಯ ಪೂರ್ಣ ಪ್ರಮಾಣದ ಜವಾಬ್ದಾರಿಯ ಹಕ್ಕು ಪತ್ರವನ್ನು ನೀಡಿದ್ದಾರೆ.
ಈ ಹಕ್ಕು ಪತ್ರವನ್ನು ತೆಗೆದುಕೊಂಡ ನಾಗಯ್ಯ ಶೆಟ್ಟಿ ಎನ್ನುವ ಗುತ್ತಿಗೆದಾರ ಅಕ್ಟೋಬರ್ 18 2024 ರ ತನಕ ಯಾವುದೇ ಕಾಮಗಾರಿ ಪರಿಪೂರ್ಣ ಮಾಡಿಲ್ಲ. ಹಾಗೂ ಹಲವು ಕಡೆ ಸಣ್ಣಪುಟ್ಟ ಕಾಮಗಾರಿಗೆ ಚಾಲನೆ ನೀಡಿದ್ದು, ಅಲ್ಪಸ್ವಲ್ಪ ನಮ್ಮ ಗಮನಕ್ಕೆ ಬಂದಿರುತ್ತದೆ. ಆದರೆ, ಸತತ ಎರಡು ವರ್ಷಗಳ ಕಾಲವಾದರೂ ಇನ್ನೂ ಕಾಮಗಾರಿಗೆ ಚಾಲನೆ ಕೊಡದಿರುವುದಕ್ಕೆ ಕಾರಣವೇನು? ಈಗಾಗಲೇ ಪುರಸಭೆಯಿಂದ ನಾವು ಮಾಹಿತಿ ಸಂಗ್ರಹಿಸಿದಾಗ 4 ಕೋಟಿ 83 ಲಕ್ಷ ಹಣ ಬಿಡುಗಡೆಯಾಗಿದ್ದು, ನಾಗಯ್ಯ ಶೆಟ್ಟಿ ಅವರ ಖಾತೆಗೆ ಜಮಾ ಆಗಿದೆ. ಆದರೂ ಈ ವ್ಯಕ್ತಿ ನಗರ ಭಾಗದಲ್ಲಿ ಅತ್ಯಂತ ಅವಶ್ಯಕವಾಗಿ ಇರುವ ಕಾಮಗಾರಿಯನ್ನು ಶುರು ಮಾಡದೇ ಇಂದು ನಾಳೆ ಎನ್ನುತ್ತಾ ಸುಳ್ಳು ಭರವಸೆ ಹಾಗೂ ಹಾರಿಕೆ ಉತ್ತರ ನೀಡುತ್ತಾ, ದಿನಗಳನ್ನು ದೂಡುತ್ತಿದ್ದಾರೆ.
ನಗರೋತ್ಥಾನ ಕಾಮಗಾರಿಯಲ್ಲಿ ಬಿಡುಗಡೆಯಾದ 8 ಕೋಟಿ ವೆಚ್ಚದ ಈ ಕಾಮಗಾರಿಯಲ್ಲಿ ನಗರ ಭಾಗದ ಅತ್ಯಂತ ಅವಶ್ಯವಿರುವ ಚರಂಡಿ ಹಾಗೂ ರಸ್ತೆ ಮಾರ್ಗವಿದೆ. ಇಲ್ಲಿನ ಪ್ರಮುಖ ಸಮಸ್ಯೆಯೆಂದರೆ, ಭಟ್ಕಳ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆ ಬಂದಾಗ ಕಳೆದೆರಡು ವರ್ಷದಿಂದ ಅಪಾರ ಪ್ರಮಾಣದ ನೀರಿನ ಪ್ರವಾಹ ಬಂದು ಮನೆಯೊಳಗೆ ಅಂಗಡಿ ಮುಂಗಟ್ಟುಗಳು ಜಲಾವೃತವಾಗಿವೆ.
ಇವೆಲ್ಲದಕ್ಕೂ ಮೂಲ ಕಾರಣ ಚರಂಡಿ ವ್ಯವಸ್ಥೆ ಸರಿಯಾಗದೇ ಇರುವುದು. ಈ ಮೇಲೆ ತಿಳಿಸಿರುವ ದಾಖಲೆಯಂತೆ 9 ಭಾಗದಲ್ಲಿ ಹತ್ತಾರು ಕಾಮಗಾರಿಗಳು ಅವಶ್ಯವಾಗಿ ಕಾರ್ಯ ಪ್ರಾರಂಭ ಮಾಡಬೇಕಾಗಿದೆ.
ಆದರೆ, ಪುರಸಭೆ ಈ ಗುತ್ತಿಗೆದಾರರಿಗೆ ಕಾಮಗಾರಿ ಪರವಾನಿಗೆ ಕೊಟ್ಟು, ನಮ್ಮ ಕೆಲಸ ಆಯಿತೆಂಬಂತೆ ಕೈಕಟ್ಟಿ ಕುಳಿತಿದೆ. ಆದರೆ ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ್ದರಿಂದ ಮನೆ ಮತ್ತು ಅಂಗಡಿ ಒಳಗೆ ನೀರು ಹೊಕ್ಕಿ ಅಪಾರ ಪ್ರಮಾಣದ ಹಾನಿ ಹಾಗೂ ಆರೋಗ್ಯ ಸಮಸ್ಯೆಯನ್ನು ಭಟ್ಕಳ ನಗರ ಭಾಗದ ಜನರು ಎದುರಿಸುತ್ತಿದ್ದಾರೆ. ಅದೂ ಅಲ್ಲದೆ. ಮಳೆಗಾಲ ಸಮಯದಲ್ಲಿ ಶಾಲಾ ಮಕ್ಕಳು ರೋಡಿನಲ್ಲಿ ನಡೆದುಕೊಂಡು ಹೋಗುವರು ಅಪಾಯಕಾರಿಯಾಗಿದೆ. ಏಕೆಂದರೆ ಪ್ರತಿ ರಸ್ತೆಯು ಹೊಂಡಗಳಾಗಿ ನೀರಿನಿಂದ ತುಂಬಿದೆ. ಇಲ್ಲಿ ಏನು ಬೇಕಾದರೂ ಅನಾಹುತ ಜರುಗಬಹುದು.
ಈಗಾಗಲೇ ಹಲವು ನಗರ ಭಾಗದವರು ಪುರಸಭೆಗೆ ಕಾಮಗಾರಿಯ ಬಗ್ಗೆ ಪ್ರತಿಭಟಿಸಿ, ಸಲ್ಲಿಸಿದ್ದಾರೆ. ಆದರೂ ಕಾಮಗಾರಿ ಟೆಂಡರ್ ಪಡೆದ ಈ ವ್ಯಕ್ತಿ ಇನ್ನೂ ಪರಿಪೂರ್ಣವಾಗಿ ಕಾಮಗಾರಿಗೆ ಚಾಲನೆ ಕೊಡದೇ ಪೂರ್ಣಗೊಳಿಸುವ ಮನೋಭಾವನೆ ಹೊಂದಿಲ್ಲ ಎಂಬುದು ಎದ್ದು ಕಾಣುತ್ತಿದೆ. ಆದ ಕಾರಣ, ಗುತ್ತಿಗೆದಾರರಿಗೆ ತಾಕೀತು ನೀಡಿ ಸಂಬಂಧಪಟ್ಟ ಅಧಿಕಾರಿಗಳಿಂದ ಶಿಸ್ತಿನ ಕ್ರಮ ಜರುಗಿಸಲು ಮತ್ತು ಈ
ಗುತ್ತಿಗೆದಾರರನ್ನು ಬದಲಾಯಿಸಿ, ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಲು ಬೇಡಿಕೆಯ ಜೊತೆಗೆ ಆಗ್ರಹ ವ್ಯಕ್ತಪಡಿಸಿದರು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರದ ಎಲ್ಲಾ ವಾರ್ಡಿನ ಜನತೆಯ ಜೊತೆಯಲ್ಲಿ ನಮ್ಮ WHR EX FOUNDATION (ವಿಶ್ವ ಮಾನವ ಹಕ್ಕುಗಳು )ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಂಬಂಧಪಟ್ಟ ಅಧಿಕಾರಿಗಳ ಕಛೇರಿಗೆ ಪ್ರತಿಭಟನೆ ಮಾಡುವ ಸಿದ್ದತೆ ಮಾಡಲಿದ್ದೇವೆ. ಈ ಸಮಸ್ಯೆಯ ಮುಂದಾಲೋಚನೆ ಅರಿತು ನಮ್ಮ ಸಂಸ್ಥೆಯಿಂದ ನಿಮಗೆ ಈ ಮನವಿ ಪತ್ರವನ್ನು ನೀಡುತ್ತಿದ್ದೇವೆ.
ಸಲ್ಲಿಸಿದ ಈ ಮನವಿ ಪತ್ರವನ್ನು ಸ್ವೀಕರಿಸಿದ 15 ದಿನಗಳ ಒಳಗಾಗಿ ನಮಗೆ ಇದರ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಇದರ ಜೊತೆ ಜೊತೆಗೆ ಭಟ್ಕಳದ ಜಾಲಿ ಪಟ್ಟಣ ಪಂಚಾಯತಿ ಭಾಗದ ಜಾಲಿ ಕ್ರಾಸ್ ಇಂದ ಹಿಡಿದು ನಗರದ ಬಹುತೇಕ ಭಾಗದಲ್ಲೂ ಪಾದಚಾರಿ ಮಾರ್ಗವು ಒತ್ತುವರಿಯಾಗಿದೆ. ಚರಂಡಿಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಶಾಲಾ ಮಕ್ಕಳು ಸೈಕಲ್ ನಲ್ಲಿ ಶಾಲೆಗೆ ಸಂಚರಿಸಲಾಗುತ್ತಿಲ್ಲ. ಜಾಲಿ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ಕಿರಿದಾದ ಮಾರ್ಗ ಇದ್ದು, ಇಲ್ಲಿ ಒಂದು ಬಸ್ ಸಂಚರಿಸಲು ಮಾತ್ರ ಮಾರ್ಗವಿದೆ. ಏಕೆಂದರೆ ಜಾಲಿ ಟ್ರಾಸ್ ನಿಂದ ದೇವಿ ನಗರದ ತನಕ ಎರಡು ಕಡೆಗಳಲ್ಲೂ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಇದರ ಜೊತೆಗೆ ಚರಂಡಿಗಳನ್ನು ಕೂಡ ಮುಚ್ಚಲಾಗಿದೆ. ಹಾಗೂ ರಸ್ತೆ ಮೇಲಿನ ತನಕ ‘ಇಂಟರ್‌ಲಾಕ್’ ಅಳವಡಿಸಿ ತಮ್ಮ ಖಾಸಗಿ ಸ್ಥಳಗಳನ್ನಾಗಿ ಪರಿವರ್ತಿಸಲಾಗಿದೆ.
ಇದರಿಂದಾಗಿ ಮಕ್ಕಳಿಗೆ ಸೈಕಲ್ ಚಾಲನೆ ಮತ್ತು ನಡೆದುಕೊಂಡು ಹೋಗಲು ತೊಂದರೆ ಆಗುತ್ತಿದೆ. ಅಪಘಾತಗಳು ಸಂಭವಿಸುವ ಮುನ್ಸೂಚನೆಯೂ ಇದೆ. ಪಾದಚಾರಿಗಳ ಸ್ಥಿತಿ ಹೇಳುವುದೇ ಬೇಡ ರಸ್ತೆ ಯಾವುದು? ಚರಂಡಿ ಯಾವುದು? ನಾವು ಸಾಗುವ ಮಾರ್ಗ ಯಾವುದು ಎಂದು ತಿಳಿಯದೇ ಜೀವ ಗಟ್ಟಿ ಹಿಡಿದು ದಿನನಿತ್ಯ ಹೆದರಿ ನಡೆಯುವ ಸ್ಥಿತಿ ಜಾಲಿ ಭಾಗದಲ್ಲಿ ನಿರ್ಮಾಣವಾಗಿದೆ.
ವಯೋವೃದ್ಧರಿಗಂತೂ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾದ ವಿಷಯವೇ ಆಗಿದೆ.
ಈ ಬಗ್ಗೆ ಸಂಬಂಧಪಟ್ಟ ಜಾಲಿ ಪಂಚಾಯತ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ವಾಟ್ಸಪ್ ಮೂಲಕ ಮನವಿಕೊಟ್ಟರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮತ್ತು ಬೇಜವಾಬ್ದಾರಿ ತೋರಿಸುತ್ತಿದ್ದುದು ನಮಗೆ ಸ್ವಷ್ಟವಾಗಿದೆ. ನಾವು ತಿಳಿಸಿದ ಸ್ಥಳವನ್ನು ಪರಿಶೀಲಿಸಿ ಸರ್ಕಾರಕ್ಕೆ ಸಂಬಂಧಪಟ್ಟ ಚರಂಡಿ ಹಾಗೂ ಪಾದಚಾರಿ ತಿರುಗಾಡುವ ಜಾಗವನ್ನು ಖುಲ್ಲಾ ಪಡಿಸಿ ಸಾರ್ವಜನಿಕರಿಗೆ ಓಡಾಡಲು ಮತ್ತು ಬದುಕಲು ಅನೂಕೂಲ ಮಾಡಿಕೊಡಬೇಕಾಗಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿಯನ್ನು ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿಯ ಗ್ರೇಡ್-2 ತಹಸೀಲ್ದಾರ ಸಂತೋಷ ಭಂಡಾರಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಅರ್ಚನಾ ಜಯಪ್ರಕಾಶ ನಾಯಕ, ಜಿಲ್ಲಾ ಘಟಕದ ಪ್ರಮುಖ ಥೆರೆಸಾ ಡಿಸೋಜಾ ಶಿರಸಿ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ, ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ,ಸದಸ್ಯರಾದ ಪಾಂಡು ನಾಯ್ಕ, ದಿನೇಶ ನಾಯ್ಕ ಇದ್ದರು.