ಜೋಯಿಡಾ : ಪ್ರತಿಭಾನ್ವಿತ ಯುವಕ ಹಾಗೂ ಜೋಯಿಡಾದ ನಿವಾಸಿ ಆದಿತ್ಯ ರೇಡ್ಕರ್ ಇವರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸಾಧನೆ ಮೆರೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಜೋಯಿಡಾದ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದ ಆದಿತ್ಯ ರವಿ ರೇಡ್ಕರ್ ಅವರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ( UGC- NET) ಉತ್ತೀರ್ಣರಾಗಿದ್ದಾರೆ.
UGC- NET ಎಂದರೆ ವಿಶ್ವವಿದ್ಯಾಲಯ ಅನುದಾನ ಆಯೋಗದ ಅಡಿಯಲ್ಲಿ ರಾಷ್ಟ್ರೀಯ ಅರ್ಹತಾ ಸಂಸ್ಥೆ ( NTA) ನಡೆಸುವ ದೇಶದ ಅತಿದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ರಾಷ್ಟ್ರೀಯ ಮಟ್ಟದ ಪರೀಕ್ಷೆಯು ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಬೋಧನಾ ಮತ್ತು ಸಂಶೋಧನಾ ಹುದ್ದೆಗಳಿಗಾಗಿ ಅಭ್ಯರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಈ ಪರೀಕ್ಷೆಗೆ ರಾಷ್ಟ್ರಾದ್ಯಂತ ಸುಮಾರು ಹತ್ತು ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಪರಿಸರ ವಿಜ್ಞಾನದ 20 ಸಾವಿರ ವಿದ್ಯಾರ್ಥಿಗಳಲ್ಲಿ ಮಾತ್ರ ಒಂದು ಸಾವಿರ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ.
ಆದಿತ್ಯ ರೇಡ್ಕರ್ ಇವರು ಸದ್ಯ ತಾವು ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಪುಣೆ ವಿಶ್ವವಿದ್ಯಾಲಯದ ಎಚ್.ವಿ. ದೇಸಾಯಿ ಮಹಾವಿದ್ಯಾಲಯದಲ್ಲಿ ಪರಿಸರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಆದಿತ್ಯ ರೇಡ್ಕರ್ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಕಾಳಿ ಬ್ರಿಗೇಡ್ ಸಂಸ್ಥಾಪಕರಾದ ರವಿ ರೇಡ್ಕರ್ ಹಾಗೂ ರೇಣುಕಾ ರೇಡ್ಕರ್ ದಂಪತಿಯ ಸುಪುತ್ರರಾಗಿದ್ದಾರೆ. ಇವರ ಸಾಧನೆಗೆ ಜೋಯಿಡಾ ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.