ಹವ್ಯಾಸಿ ಲೇಖಕರು: ದೀಪಾ ಪ್ರಕಾಶ ಹೆಗಡೆ ಕಲ್ಲೇಶ್ವರ
ನಮ್ಮ ಕುಟುಂಬ ರಾಮನಗುಳಿಯ ರಾಮಪಾದುಕಾ ದೇವಸ್ಥಾನದಿಂದ ದಾಬೋಲಿಮ್ ಏರ್ ಪೋರ್ಟ್ ಗೋವಾ ಟು ಲಕ್ಷ್ಮೀ, ಲಕ್ಷ್ಮೀದಿಂದ ಅಯೋಧ್ಯಾ ತಲುಪಿದಾಗ ರಾತ್ರಿ 1:30 ಗಂಟೆ. ನಿದ್ದೆಯ ಜೊಂಪು ಅಯೋಧ್ಯೆಯ ಚೂಡಾಮಣಿ ಚೌಕದಲ್ಲಿ ಹಾರಿ ಹೋಯಿತು. ರಾಮ ಜನ್ಮಭೂಮಿ ಅಯೋಧ್ಯೆ ಎಂದೊಡನೆ ಫಟಕ್ಕನೆ ಕಣ್ತೆರೆದು ಕೈ ಜೋಡಿಸಿದೆವು. ಚೂಡಾಮಣಿ ಚೌಕ ಎಂದರೆ ಅಯೋಧ್ಯೆಯ ಹೆಬ್ಬಾಗಿಲು ಅಂದರೆ ತಪ್ಪಾಗಲಾರದು. ಅಲ್ಲಿಂದ ಯಾವುದೇ ಹೊರಗಿನವರ ವಾಹನ ಒಳಪ್ರವೇಶಿಸಬಾರದೆಂಬ ನಿರ್ಬಂಧವಿದ್ದ ಕಾರಣ ಮೋಟರ್ ರಿಕ್ಷಾದಲ್ಲಿ ನಮಗೆಂದು ನಿಯೋಜಿತವಾಗಿದ್ದ “ರಾಮಾಯಣ ದರ್ಶನಂ” ವಸತಿ ಗೃಹಕ್ಕೆ ಪಯಣಿಸಿದೆವು. ದಾರಿಯುದ್ದಕ್ಕೂ ಆ ರಾತ್ರಿಯಲ್ಲೂ ಕಣ್ಣಗಲಿಸಿ ನೋಡುತ್ತಾ ಸಾಗಿದೆವು. ಕಿರಿದಾದ ರಸ್ತೆಗಳು, ಇಕ್ಕೆಲಗಳಲ್ಲಿ ಇತಿಹಾಸ ಸಾರುವ ಪುರಾತನ ಶಿಥಿಲ ಕಟ್ಟಡಗಳು, ಅದಕ್ಕೆ ಚಾಚಿ ಈಗಿನ ನೂತನ ಭವ್ಯ ರೆಸಾರ್ಟ್‌ಗಳು, ಎತ್ತರದ ಬೀದಿ ದೀಪಗಳು, ರಾಮ ಜನ್ಮಭೂಮಿಗಾಗಿ ಹೋರಾಟ ಮಾಡಲು ನಿರ್ಮಿಸಿದ ಬೃಹತ್ ಎರಡು ಸುತ್ತನ ಬೇಲಿಗಳನ್ನು ದಾಟಿ ಸಂದಿಯಲ್ಲಿ ಸಾಗಿ ವಸತಿ ಗೃಹ ತಲುಪಿದೆವು. ನಾಳೆ ರಾಮನ ಕಣ್ಣುಂಬಿಸಿಕೊಳ್ಳುವ ಕೌತುಕದಿಂದ ರಾಮನ ಧ್ಯಾನಿಸಿ ನಿದ್ರಿಸಿದೆವು.
ಮರುದಿನ ಸೂರ್ಯ ರಶ್ಮಿ ನಮ್ಮ ಕಣ್ಣು ಕುಕ್ಕಿದಾಗ ಎಚ್ಚರಗೊಂಡು ಲಗುಬಗೆಯಿಂದ ತಯಾರಾಗಿ ನಮ್ಮ ದೊಡ್ಡಭಾವನ ಕುಟುಂಬವೂ ಜೊತೆ ಸೇರಿ ದರ್ಶನಕ್ಕೆ ಹೊರಟೆವು. ಮೊದಲಿಗೆ ವಾಡಿಕೆಯಂತೆ ಹನುಮಾನ್ ಘಡಿ ಪ್ರವೇಶ. ಆದರೆ ಅದಕ್ಕೂ ಮೊದಲೇ ಅಯೋಧ್ಯೆಯ ಬೀದಿಗಳಲ್ಲಿ ನೂರಾರು ಹನುಮಂತರು (ಕೆಂಪು ಹಿಂಭಾಗದ ವಾನರರು) ದರ್ಶನ ನೀಡಿದರು. ಹನುಮಾನ್‌ಗೆ ನಮಿಸಿ ಅಲ್ಲಿಂದ ಸರಯೂ ನದಿಯೆಡೆಗೆ ಸಾಗಿದೆವು. ಸರಯೂ ನದಿ ವಿಶಾಲವಾಗಿದ್ದು ಎಲ್ಲಡೆ ಎಚ್ಚರಿಕೆಯಿಂದ ಸಾಗಲು ಅನುವು ಮಾಡಿದ್ದರು. ನನಗೆ ರಾಮಾಯಣ ಕಥೆ ಅಮ್ಮ ಹೇಳುವಾಗ ಸರಯೂ ನದಿಯ ತಟವನ್ನು ಹೇಗೆ ಬಳಸಿಕೊಳ್ಳುತಿದ್ದರೆಂದು ತಿಳಿಸಿದ ಬಗೆ ನೆನಪಾಯಿತು. ಗಂಡಸರಿಗೆ ಈಜುಕೊಳ, ಹೆಂಗಸರಿಗೆ ಸ್ನಾನ, ಬಟ್ಟೆ ಒಗೆಯುವುದು, ಸಂಜೆಯಾದರೆ ಪವಿತ್ರ ಜಪ-ತಪ, ಸಂಧ್ಯಾದೀಪ ಆಧ್ಯಾತ್ಮಿಕ ತಾಣ, ಸೀತೆ…ರಾಮ., ಲಕ್ಷ್ಮಣ…….ದಶರಥ ಮಹಾರಾಜರು ಇಲ್ಲಿ ಹೇಗೆ ವಿರಮಿಸಿದ್ದರೆಂಬ ಕಲ್ಪನೆಯತ್ತ ಮನ ಸಾಗಿತು. ಸರಯೂ ಸ್ಪರ್ಶಿಸಿ ಪಾವನಗೊಂಡು ಭವ್ಯ ರಾಮಲಲ್ಲಾನ ಕಣ್ಣುಂಬಿಸಿಕೊಳ್ಳಲು ಸಾಗಿದೆವು.
ಮೊಬೈಲ್, ಬ್ಯಾಗೆಲ್ಲಾ ಲಗುಬಗೆಯಿಂದ ಲಾಕರ್‌ಗೆ ತುಂಬಿಸಿ ಮೊದಲೇ ವಿಶೇಷ ದರ್ಶನ ನಿಗದಿ ಆದ ಕಡೆ ಸಾಗಿದೆವು. ಎಲ್ಲಿ ನೋಡಿದರೂ ಸೀತಾ ರಾಮರ ಜಪ, ಜೈ ಶ್ರೀರಾಮ್ ಅನ್ನುವ ಘೋಷ ಎಲ್ಲೆಡೆ ಮೊಳಗುತ್ತಿತ್ತು. ನಾವು ರಾಮ ಸೀತಾರ ಜಪಿಸುತ್ತಾ ರಾಮಲಲ್ಲಾರ ಕಣ್ಣಾರೆ ದರ್ಶಿಸಲು ಸರತಿಯಲ್ಲಿ ಸಾಗಿದೆವು. ಹಿಂದುಗಳ ಆರಾಧ್ಯದೈವ, ಅಜಾತ ಶತ್ರು, ಏಕಪತ್ನಿ ವೃತಸ್ಥ, ರಘುಕುಲ ತಿಲಕ, ಮರ್ಯಾದಾ ಪುರುಷೋತ್ತಮನ್ನು ದರ್ಶಿಸಲು ಅವಕಾಶ ಸಿಕ್ಕಿದ್ದು ನಮ್ಮ ನರ-ನರಗಳಲ್ಲಿ ಚೈತನ್ಯದ ಚಿಲುಮೆಯನ್ನು ಹರಿಸಿದಂತಾಯಿತು. ರಾಮನ ದರ್ಶಿಸುವ ಕನಸು ಇಷ್ಟು ಬೇಗ ನನಸಾಗುವ ಊಹೆಯು ಇರದ ನನಗೆ ಮೈ ರೋಮಾಂಚನಗೊಳಿಸಿತ್ತು. ನನ್ನವರ ಕೈ ಹಿಡಿದು ಮುಂದೆ ಮುಂದೆ ರಭಸದಿಂದ ರಾಮನ ನೋಡಲು ಓಡಿದೆವು. ಓಡೋಡಿ ರಾಮನಿಗೆ ಕೈ ಜೋಡಿಸಿ ನಮಿಸಿದಾಗ ಮನಸ್ಸಿಗೆ ಏನೋ ನೆಮ್ಮದಿಯ ಭಾವ..
ಗರ್ಭಗುಡಿ ಪ್ರವೇಶಿಸುತ್ತಲೇ ಶಕ್ತಿಮೀರಿ ಜೈ ಶ್ರೀರಾಮ್ ಎಂದು ದೇವರನ್ನು ನೆನೆದೆವು. ಅದೆಂಥ ಭವ್ಯ ಗುಡಿಯಿದು. ಕಲ್ಲಿಂದ ಕಲ್ಲಲ್ಲೇ 1000 ವರ್ಷಗಳಾದರೂ ಮಾಸದ ಕೆತ್ತನೆ. ನೂರಾರು ದೇವರುಗಳು, ಎಲ್ಲರಿಗೂ ಕೈ ಮುಗಿದು ಗೋಪುರದ ಶೈಲಿಗಳನ್ನು ಕಣ್ಣುಂಬಿಸಿಕೊಳ್ಳುತ್ತಾ ರಾಮಲಲ್ಲಾನೆಡೆ ನಡೆದೆವು. ರಾಮನ ನೋಡಿದಾಗ ಅಗೋಚರ ಶಕ್ತಿ ನಮ್ಮೊಳಗೆ ಧನಾತ್ಮಕ ಸಂಚಾರವಾಗಿ ಇಡೀ ದೇಹ ಒಮ್ಮೆಲೆ ಕಂಪಿಸಿದಂತಾಯಿತು. ರಾಮನ ನೋಡಿದಾಗ ನಮ್ಮೊಳಗಿರುವ ಎಲ್ಲಾ ಕಷ್ಟ ಮರೆತು ಮನಸ್ಸು ಶಾಂತವಾಯಿತು. ಭಕ್ತಿಯಿಂದ ನಮಿಸಿ ಮತ್ತೊಮ್ಮೆ ಬರಲು ಆಶೀರ್ವದಿಸು, ಕಲಿಯುಗದ ಕುಲಕೋಟಿಗಳನ್ನು ಉದ್ಧರಿಸೆಂದು ಬೇಡಿದೆವು. ಎಷ್ಟು ನೋಡಿದರೂ ನೋಡುತ್ತಲೇ ಇರಬೇಕೆಂಬ ಆಸೆ, ಅಲ್ಲಿಂದ ಕದಲಲು ಮನಸ್ಸಾಗದು. ರಾಮ ನಮ್ಮನ್ನೇ ನೋಡುತ್ತಿರುವ ಭಾವ, ಆ ಮುಖದಲ್ಲಿನ ತನ್ಮಯತೆ ಶಕ್ತಿಯನ್ನು ವರ್ಣಿಸಲಾಗದು. ಭಗವಂತನನ್ನು ಆರಾಧಿಸುವುದೇ ಭಕ್ತಿಯ ಅಭಿವಂದನೆ. ಈ ಹುಲುಮಾನವನ ಆಜನ್ಮ ತಪ್ಪನ್ನು ಕ್ಷಮಿಸೆಂದು ಬೇಡಿಕೊಂಡು ವಿಶಾಲವಾದ ಪ್ರಾಂಗಣದ ಎರಡೂ ಕಡೆಯ ಭಿತ್ತಿ ಚಿತ್ರ ವೀಕ್ಷಿಸುತ್ತಾ ಅನ್ನ ಪ್ರಸಾದ ಸ್ವೀಕರಿಸಿದೆವು. ಕಾಲು ಭಾಗ ನಿರ್ಮಾಣವಾದರೂ ದೇಗುಲದ ಸೌಂದರ್ಯ ಅವರ್ಣನೀಯ. ಭಾರತದ ಹೆಮ್ಮೆ ಅಯೋಧ್ಯೆಯ ದಿವ್ಯ ಮಣ್ಣಿಗೊಂದು ನಮನ ಹೇಳಿ ನಮ್ಮ ಪ್ರಯಾಣ ಪ್ರಯಾಗರಾಜಕ್ಕೆ ಸಾಗಿತು. ಅಲ್ಲಿ ಪಿತೃಪಕ್ಷಕ್ಕೆ ಶ್ರಾದ್ದ ನಿರ್ವಹಿಸಲೆಂದೇ ತೆರಳಿದ ನಾವು ಪಿತೃಗಳಿಗೆ ಪಿಂಡ ಹಾಕಿ ಶ್ರಾದ್ಧ ವೇದೊಕ್ತಿಯೊಂದಿಗೆ ಆಯಿತು. ವೇಣಿದಾನ, ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ನಮ್ಮ ಜೀವನದಲ್ಲಿ ಅತ್ಯಂತ ಖುಷಿ ಕೊಟ್ಟಿತು. ಅಲ್ಲಿಂದ ವಿಶ್ವನಾಥನ ಸನ್ನಿಧಿಗೆ ಮೂರು ಗಂಟೆಗಳ ಪ್ರಯಾಣ ಬೆಳೆಸಿದೆವು.
ಕಾಶ್ಯಾಂ ಮರಣಾನಾಂ ಮುಕ್ತಿ:, ಜಗತ್ತಿನಲ್ಲಿರುವ ಹಿಂದುಗಳ ವಿಶ್ವಾಸ, ವೇದ – ಉಪನಿಷತ್ತು ಮಹಾಭಾರತ- ರಾಮಾಯಣದಲ್ಲಿ ಉಲ್ಲೇಖವಾಗಿರುವ ಕ್ಷೇತ್ರ, ವಿಶಾಲಾಕ್ಷಿ ಎಂಬ ಶಕ್ತಿಪೀಠ, ಇದು ಹಿಂದು, ಬೌದ್ಧ, ಜೈನರಿಗೂ ಪವಿತ್ರ ಕ್ಷೇತ್ರ. ಹೆಜ್ಜೆ ಹೆಜ್ಜೆಗೂ ಮಂದಿರಗಳಿವೆ. ಗಂಗೆಯ ದಡದ ಉದ್ದಕ್ಕೂ 88 ಘಾಟ್‌ಗಳಿವೆ ಎಂಬ ಉಲ್ಲೇಖವಿದೆ. ಅದರಲ್ಲಿ ಪ್ರಮುಖ ಅಸ್ಸಿ ಘಾಟ್, ತುಳಸಿ ಘಾಟ್, ನಮೋ ಘಾಟ್, ಕರ್ನಾಟಕ ಘಾಟ್, ಹನುಮಾನ್ ಘಾಟ್, ಹರಿಶ್ಚಂದ್ರ ಘಾಟ್, (ಮಣಿಕರ್ಣಿಕಾ ಘಾಟ್) ಮಾನಸರೋವರ ಘಾಟ್, ಅಹಲ್ಯಾಭಾಯಿ ಘಾಟ್, ಹೀಗೆ ಘಾಟ್ ಗಳಿಂದ ಗಂಗೆಯು ತನ್ನನ್ನು ಜನರಿಗೆ ಸಮರ್ಪಿಸಿಕೊಂಡಿದ್ದಾಳೆ.
ಬನಾರಸ್, ವಾರಣಾಸಿ, ಕಾಶಿ ಎಂಬ ಮೂರು ಹೆಸರಿನೊಂದಿಗೆ ಈ ಊರನ್ನು ಕರೆಯುತ್ತಿದ್ದು ವಿಶ್ವನಾಥ ಆರಾಧ್ಯ ದೈವ. ಕಾಶಿ ಜನನಿಬಿಡ, ಚಿಕ್ಕ ರಸ್ತೆ ಗಲ್ಲಿ ಗಲ್ಲಿಗಳ ನಡುವೆ ತನ್ನ ಅಸ್ಥಿತ್ವ ಸಾರುತ್ತಿತ್ತು. ಎಲ್ಲಿ ನೋಡಿದರೂ ಸೈಕಲ್ ರಿಕ್ಷಾ, ಮೋಟರ್ ರಿಕ್ಷಾ, ರಸ್ತೆ ಬದಿಯಲ್ಲಿ ಗೋವುಗಳು, ಮತ್ತೊಂದೆಡೆ ವಾರಣಾಸಿ ಬೀದಿಗಳಲ್ಲಿ ಅಲ್ಲಿಯ ಪ್ರಸಿದ್ಧ ತಿಂಡಿಗಳಾದ ಜಿಲೇಬಿ, ಕಚೋರಿ, ಪೇಡಾ, ರಸಮಲೈ ಬಾಯಲ್ಲಿ ನೀರೂರಿಸುತ್ತಿತ್ತು. ಪವಿತ್ರ ಗಂಗಾ ದಡದಲ್ಲಿ ನಾವು ಮತ್ತೊಮ್ಮೆ ಪಿತೃಗಳಿಗೆ ಶ್ರಾದ್ಧ ಮಾಡಿ ಗಂಗಾ ಸ್ನಾನ ಮಾಡಿ ಶುದ್ಧರಾದೆವು. ಸಂಜೆ ಗಂಗಾರತಿ ನೋಡುವ ಧಾವಂತ. ಓಡೋಡಿ ಹೋದರೆ ಅಲ್ಲಿಯ ಜನಜಂಗುಳಿಗೆ ನಮಗೆ ಅವಕಾಶ ಸಿಗುವುದೋ ಇಲ್ಲವೋ ಅಂತಿದ್ದಾಗ ವಿಶ್ವನಾಥನ ಕೃಪಕಟಾಕ್ಷದಿಂದ ನುಸುಳಿ ಗಂಗಾರತಿ ವೀಕ್ಷಣೆಗೆ ಅಣಿಯಾದೆವು. ವೇದ ಘೋಷ ಭಜನೆಯೊಂದಿಗೆ ದೈವವನ್ನು ಆರಾಧಿಸಿ ವಿವಿಧ ಬಗೆಯ ಆರತಿ ಗಂಗೆಗೆ ತೋರುವ ರೀತಿ ನೋಡಲು ಎರಡು ಕಣ್ಣು ಸಾಲದು. ಜಗತ್ತಿನ ಎಲ್ಲೆಡೆಯಿಂದ ಬರುವ ಭಕ್ತರ ಸೆಳೆಯುವ ಶಾಸ್ತ್ರೋಕ್ತವಾದ ದಿವ್ಯಾರತಿಯಿದು, ಕರ್ನಾಟಕದಲ್ಲಿ ಕಾವೇರಿಗೂ ಈ ಆರತಿಯಾದರೆ ಅದೆಷ್ಟು ಚೆನ್ನ ಎಂಬ ಪರಿಕಲ್ಪನೆಯೊಂದಿಗೆ ಬಂದ ದೃಶ್ಯಮಾಧ್ಯಮಗಳು ನಮಗೆ ಜೊತೆಯಾದವು. ಶ್ರದ್ದೆಯಿಂದ ಒಂದೇ ಬಗೆಯ ವಸ್ತ್ರ ಧರಿಸಿ ವಿವಿಧ ವಿನ್ಯಾಸದ ದೀಪಗಳನ್ನು ನಾನಾ ಬಗೆಯಲ್ಲಿ ಗಂಗೆಗೆ ಆರತಿ ಮಾಡುವಾಗ ನಮ್ಮ ಮನ ಪುಳಕಿತಗೊಂಡಿತು. ಒಂದು ಗಂಟೆಯ ಗಂಗಾರತಿ ಮುಗಿಸಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಕಾಲಭೈರವೇಶ್ವರ, ಮಹಾಮೃತ್ಯುಂಜಯ, ಆಂಜನೇಯನಿಗೆ ನಮಿಸಿ ಪ್ರಸಿದ್ದ ಬನಾರಸ್ ಪಾನ್ ಮೆಲ್ಲುತ್ತಾ ಸಜ್ಜನ ಚಿಂತಾಮಣಿ ಭಟ್ಟರ ಮನೆಯೆಡೆಗೆ ಸಾಗಿದೆವು. ಭಟ್ಟರ ಆತಿಥ್ಯ, ಊಟ- ತಿಂಡಿಯ ಬಗ್ಗೆ ಅವರ ಸರಳತೆಗೊಂದು ಹ್ಯಾಟ್ಸಾಪ್ ಹೇಳಲೇಬೇಕು.
ಮಾರನೇ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಮ್ಮ ಬಹು ದಿನದ ಭಕ್ತಿಯ ಪರಾಕಾಷ್ಟೆ ವಿಶ್ವನಾಥನ ಮಂದಿರದ ಕಡೆಗೆ ಸಾಗಿದೆವು. ಬೆಳಗ್ಗಿನ ನಾಲ್ಕು ಗಂಟೆಗೆ ಕಾಶೀ ನಗರಿ ಎಚ್ಚರಗೊಂಡು ಕೈಂಕರಣ ನೆರವೇರಿಸುತ್ತಿದ್ದುದು. ಆಗಲೂ ಟ್ರಾಫಿಕ್ ಜಾಮ್ ನಂತರ ನಡೆದೇ ಮಂದಿರ ತಲುಪಿದೆವು. ಗಂಗಾ ಕಾರಿಡಾರ್ 400 ಮೀಟರ್ ಉದ್ದದ ಗಂಗಾ ತಡಿಯಿಂದ ದೇಗುಲದೆಡೆ ದರ್ಶನ ಹೊಸ ಅಧ್ಯಾಯ ಬರೆದಿದೆ. ವಿಶ್ವನಾಥನ ದೇಗುಲಕ್ಕೆ 4 ದ್ವಾರಗಳಿವೆ. ವಿಶಾಲ ಮತ್ತು ಸುಸಜ್ಜಿತವಾದ ಹೊರಾಂಗಣ, ಶಂಕಾರಾಚಾರ್ಯ, ಅಹಲ್ಯಾಬಾಯಿ ಹೋಲ್ಕರ್ ಪ್ರತಿಮೆ ಕಾಣಸಿಗುತ್ತದೆ. ರಾಣಿ ಅಹಲ್ಯಾಬಾಯಿ, ಹೊಳ್ಳರ್ ಪುನರ್ಜೀವನ ಕೊಟ್ಟ ಮಂದಿರಕ್ಕೆ ಪಂಜಾಬಿನ ರಾಜ ರಣಜಿತ್ ಸಿಂಗ್ 1835 ರಲ್ಲಿ ತೊಡಿಸಿದ 800 ಕೆಜಿ ಚಿನ್ನದ ಲೇಪನದ ಮಂದಿರವಿದು. ದ್ವಾದಶ
ಜ್ಯೋತಿರ್ಲಿಂಗದಲ್ಲೊಂದಾದ ಕಾಶಿ ವಿಶ್ವನಾಥನ ದರ್ಶನ ಪಡೆದು ಪತ್ರೆ, ಹಾಲು ಹಾಕಿ ಕೈ ಮುಗಿದಾಗ ಆನಂದ ಅವರ್ಣನಾತೀತ. ನನ್ನ ಜೀವನ ಪಾವನ ಎಂಬ ಪರಿಕಲ್ಪನೆ ಭಕ್ತಿ ಶ್ರದ್ದೆಯಿಂದ ನಮಿಸಿ ಸರತಿಯಲ್ಲೆ ಅನ್ನಪೂರ್ಣೇ, ಗಣಪತಿ, ಜ್ಞಾನವ್ಯಾಪಿ, ಬಾವಿ ಸುತ್ತಲಿನ ಆಂಜನೇಯ, ಜ್ಞಾನವ್ಯಪಿ ಮಸೀದಿಯನ್ನು ನುಂಗುವ ರೀತಿಯಲ್ಲಿ ನೋಡುವ ನಂದಿ, ಮೂಲ ಶಿವಲಿಂಗ ನಮ್ಮನ್ನು ಮತ್ತೆ ಮತ್ತೆ ನೋಡಬೆಕೆನ್ನಿಸುವ ವಿಶಾಲವಾದ ವಿಶ್ವನಾಥನ ಮಂದಿರದ ಪಕ್ಕದಲ್ಲಿಯೇ ಸಾಗಿ ವಿಶಾಲಾಕ್ಷಿ ದೇವಿಯ ದರುಶನ ಪಡೆದೆವು. ಪ್ರಧಾನಿ ಮೋದಿಜಿಯವರು ಕಾಶಿಯ ವಿಶ್ವನಾಥ ಮಂದಿರದ ಸುತ್ತಗಲಕ್ಕೂ ವಿಶಾಲವಾದ ಜಾಗ ಮಾಡಿಸಿ 10000 ಜನರು ಪ್ರಾಂಗಣದಲ್ಲಿ ಒಮ್ಮೇಲೆ ಸೇರುವಂತೆ ಮಾಡಿ ವಿಶ್ವ
ವಿಖ್ಯಾತಿಗೊಳಿಸಿದ್ದು ನಮ್ಮ ಭಾಗ್ಯ. ವಿಶಾಲವಾದ ಹೊರಪ್ರಾಂಗಣದಲ್ಲಿ ನೆನಪಿಗೆ ಭಾವಚಿತ್ರ ಕ್ಲಿಕ್ಕಿಸಿಕೊಂಡು ಮತ್ತೆ-ಮತ್ತೆ ಶಿಖರ ದೇಗುಲ ನೋಡಿ ಮನಸ್ಸನ್ನು ಸಮಾಧಾನಗೊಳಿಸಿ ಮುಂದೆ ಸಾಗಿದೆವು. ಏಕಾದಶ ರುದ್ರ ಮುಗಿಸಿ ಬಿರ್ಲಾ ಮಂದಿರ, ಬನಾರಸ್, ಹಿಂದೂ ವಿಶ್ವವಿದ್ಯಾನಿಲಯ, ಹನುಮಾನ್ ಮಂದಿರ, ಕವಡೆಬಾಯಿ ಮಂದಿರ, ಮಣಿಕರ್ಣಿಕಾ ಘಾಟ್, ಕಾಶಿ ರಾಜನ ಅರಮನೆ, ದುರ್ಗಾ ಮಂದಿರ, ಸ್ವಾಮಿ ನಾರಾಯಣ ಮಂದಿರ ನೋಡುತ್ತಾ ಭಕ್ತಿಯ ಪರವಶತೆಯಿಂದ ಕಣ್ತುಂಬಿಕೊಂಡೆವು. ಬನಾರಸ್ ಸೀರೆ ಇಲ್ಲಿನ ವಿಶೇಷತೆಗಳಲ್ಲೊಂದು. ನಮಗೆ ಬೇಕಾದ ಗಂಗೋದಕ, ಕಾಶಿದಾರ, ರುದ್ರಾಕ್ಷಿ ಸರ, ಶಿವಲಿಂಗ, ವಿಭೂತಿ, ಕುಂಕುಮ ಎಲ್ಲವನ್ನೂ ಪೇಟೆಯಲ್ಲಿ ಖರೀದಿಸಿದೆವು. ಕಾಶಿ ಮತ್ತೂ ಸುತ್ತಾಡಬೇಕು, ವಿಶ್ವನಾಥನ ಮಡಿಲಲ್ಲೇ ಇರಬೇಕೆಂಬ ಆಸೆ ಇದ್ದರೂ ಮೊದಲೇ ನಿಯೋಜಿತಗೊಂಡ ಗಯಾಕ್ಕೆ ಹೊರಟೆವು.
ದಾರಿ ಮಧ್ಯ ಸೀತೆ ಐಕ್ಯಳಾದ ಸೀತಾಮಡಿ, ಆಂಜನೇಯ ನೋಡಿ ಬಿಹಾರದ ಬೋಧಗಯಾದಲ್ಲಿ ರಾತ್ರಿ ವಿರಮಿಸಿದೆವು. ಮರುದಿನ ಗಯಾದಲ್ಲಿ
ಫಾಲ್ಗುಣಿ ನದಿ, ವಿಷ್ಣುಪಾದ, ಆಲದ ಮರಕ್ಕೆ ಪಿಂಡ ಪ್ರಧಾನ ಮಾಡಿ ಪಿತೃಕಾರ್ಯ ಸಮಾಪ್ತಿಗೊಳಿಸಿದೆವು. 82 ಅಡಿ ಬುದ್ಧನ ದರ್ಶನ ಪಡೆದು, ಬೋಧಿವೃಕ್ಷ ನೋಡಿ ಬುದ್ಧನ ವ್ಯಕ್ತಿತ್ವದ ಅಪಾರತೆ ಸಾರುತ್ತಾ ಪಾಟ್ನಾದಿಂದ ಹೈದರಾಬಾದ್ ಮೂಲಕ ಗೋವಾಕ್ಕೆ ವಿಮಾನಯಾನವಾಗಿ ಬಂದು ನಮ್ಮ ಮನೆ ಸೇರಿದೆವು. ಮನಸ್ಸು ಬದಲಾವಣೆಯೊಂದಿಗೆ ಹೊಸತನದ ಚೇತನವಾಗಿತ್ತು.