ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲವಾದ ಅವಕಾಶಗಳಿದ್ದು, ಪಶ್ಚಿಮ ಘಟ್ಟ, ಅರಣ್ಯ ಹಾಗೂ ನದಿ ಮತ್ತು ಸಮುದ್ರಗಳ ಸಮ್ಮಿಲನವಾಗಿರುವ ಜಿಲ್ಲೆಯಲ್ಲಿ ಸಿ.ಆರ್.ಝಡ್ ಹಾಗೂ ಅರಣ್ಯ ಇಲಾಖೆಯ ಕಾನೂನುಗಳ ಉಲ್ಲಂಘನೆ ಆಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಸೋಮವಾರ ಕಾರವಾರದ ಅಜ್ವಿ ಓಷನ್ ಸಭಾಂಗಣದಲ್ಲಿ, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಬೀಚ್ ಟೂರಿಸಮ್, ಟೆಂಪಲ್ ಟೂರಿಸಮ್, ನದಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅವಕಾಶಗಳಿದ್ದು ಈ ಬಗ್ಗೆ ಈಗಾಗಲೇ ಇದಕ್ಕಾಗಿ ಎಲ್ಲಾ ಇಲಾಖೆಗಳ ನೆರವು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಪಂಚತಾರಾ ಹೋಟೆಲ್ ಗಳನ್ನು ಸರ್ಕಾರದ ವತಿಯಿಂದ ಅಥವಾ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಚಿಂತನೆ ನಡೆದಿದ್ದು, ಜಿಲ್ಲೆಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರಿನಲ್ಲಿ 1500 ಕೋಟಿ ರೂ ವೆಚ್ಚದಲ್ಲಿ ಪೋರ್ಟ್ ನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಅಂಕೋಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವು ಮತ್ತಷ್ಟು ಬೆಳವಣಿಗೆಯಾಗಲಿದ್ದು, ಮಂಗಳೂರು ನಿಂದ ಕಾರವಾರದವರೆಗಿನ 13 ಐಲ್ಯಾಂಡ್ ಗಳನ್ನು ಸರ್ಕಾರದಿಂದ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೆ. ಸೈಲ್ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ತೊಂದರೆಗಳಿವೆ. ತಿಳಮಾತಿ ಬೀಚ್ ಅಭಿದ್ಧಿಯಾಗಿಲ್ಲ. ಕಾಳಿ ನದಿ ಸಂಗಮದಲ್ಲಿ ಅಭಿವೃದ್ಧಿಗೆ ಸಿಆರ್ ಜಡ್ ತೊಡಕಾಗಿದೆ. ಜಿಲ್ಲೆಯಲ್ಲಿ ಹಲವಾರು ನದಿಗಳ ಸಂಗಮ ಪ್ರದೇಶ ಇದ್ದು ಅವುಗಳ ಅಭಿವೃದ್ಧಿಯಾಗಬೇಕಿದೆ. ಕರಾವಳಿಯ ಐಲ್ಯಾಂಡ್ ಗಳು ಅಭಿವೃದ್ಧಿಯಾದಾಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮ ಬೆಳೆಯಲು ಸಾಧ್ಯ ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗವಕಾಶಗಳಿವೆ. ಜಿಲ್ಲೆಯಲ್ಲಿ ಬೀಚ್ ಟೂರಿಸಮ್, ಟೆಂಪಲ್ ಟೂರಿಸಮ್ ಗೆ ವಿಪುಲ ಅವಕಾಶಗಳಿವೆ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯ ಎಲ್ಲಾ ಇಲಾಖೆ ಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಶಿಬಿರದಲ್ಲಿ ರಚನೆಯಾದ ಚಿತ್ರಗಳನ್ನು ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಚಿತ್ರಕಲಾ ಕಲಾವಿದ ರಾಘವೇಂದ್ರ ಆಮಿನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಉಪಸ್ಥಿತರಿದ್ದರು.
ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ನೂತನ ಕಾಫಿ ಟೇಬಲ್ ಬುಕ್ ನ ಕವರ್ ಪೇಜ್ ಬಿಡುಗಡೆ ಮಾಡಲಾಯಿತು.
ಚಿತ್ರಕಲಾ ಸ್ಪರ್ಧೇ, ಮರಳು ಶಿಲ್ಪ ರಚನೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನ ವಿತರಿಸಲಾಯಿತು.