ಸಿದ್ದಾಪುರ: ಸ್ಥಳೀಯ ಧರ್ಮಶ್ರೀ ಫೌಂಡೇಷನ್ ಇವರಿಂದ ಸತ್ಯಾಗ್ರಹಿ ತಿಮ್ಮಯ್ಯ ಹೆಗಡೆ ಹೂವಿನಮನೆ ಇವರು ಪಾಲ್ಗೊಂಡ ಕರನಿರಾಕರಣೆ ಚಳುವಳಿಯನ್ನು ನೆನಪಿಸುವ ‘ಹಾವಿನ ಹಂದರದಿಂದ ಹೂವ ತಂದವರು’ ಕಾದಂಬರಿ ಲೋಕಾರ್ಪಣೆ ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಅ.3ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರು ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಕರನಿರಾಕರಣೆ ಸಂದರ್ಭದ ಚಿತ್ರಣವನ್ನು ಬಿಂಬಿಸುವುದರೊಂದಿಗೆ ಅಂದು ಕರನಿರಾಕರಣೆಯ ಸಂದರ್ಭದಲ್ಲಿ ಹೋರಾಟ ಮಾಡಿದವರ ಕುರಿತು ಇರುವುದರೊಂದಿಗೆ ವಿಶೇಷವಾಗಿ ಸಿದ್ದಾಪುರ ತಾಲೂಕಿನ ಭಾಷೆಯ ಮೂಲಕ ಕಾದಂಬರಿ ರಚಿಸಲಾಗಿದೆ ಎಂದು ಹೇಳಿದರು.
ಧರ್ಮಶ್ರೀ ಪೌಂಡೇಷನ್ನಿನ ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ ಈ ಕಾದಂಬರಿ ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿ ನೀಡುವುದಾಗಿದೆ. ಸ್ವಾತಂತ್ರ್ಯ ಹೋರಾಟದ ಕುರಿತು ಶಾಲಾ ಪಠ್ಯಪುಸ್ತಕದಲ್ಲಿ ಬರುವಂತಾಗಬೇಕು. ಆ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಕಾದಂಬರಿ ಲೋಕಾಪರ್ಣಣೆ ಮಾಡುವರು. ಧರ್ಮಶ್ರೀ ಪೌಂಡೇಷನ್ನಿನ ಗೌರವಾಧ್ಯಕ್ಷ ರಾಮಮೋಹನ ಆರ್.ಹೆಗಡೆ ಅಧ್ಯಕ್ಷತೆವಹಿಸುವರು. ಖ್ಯಾತ ಸಾಹಿತಿ ಶಾ.ಮಂ.ಕೃಷ್ಣರಾವ್, ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ, ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರು ಉಪಸ್ಥಿತಿರುತ್ತಾರೆ. ದಿವಾಕರ ಹೆಗಡೆ ಕೆರೆಹೊಂಡ ಪುಸ್ತಕ ಪರಿಚಯ ಮಾಡುವರು.
ಇದೇ ಸಂದರ್ಭದಲ್ಲಿ ಕರನಿರಾಕರಣೆ ಚಳುವಳಿಯಲ್ಲಿ ಪ್ರಮುಖವಾಗಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸಲಾಗುತ್ತದೆ ಎಂದು ಹೇಳಿದರು. ವಿಜಯ ಹೆಗಡೆ ದೊಡ್ಮನೆ, ಪರಮೆಶ್ವರಯ್ಯ ಕಾನಳ್ಳಿಮಠ ಉಪಸ್ಥಿತರಿದ್ದರು.