ಜೋಯಿಡಾ : ತಾಲೂಕಿನ ಉಳವಿ ಸೇವಾ ಸಹಕಾರಿ ಸಂಘದ 43 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಾಸುದೇವ ನಾರಾಯಣ ಗೌಡ ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾದಿಮಹಲ್ ಸಭಾಭವನದಲ್ಲಿ ಜರುಗಿತು.
ಸಭೆಯಲ್ಲಿ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಮುಖ್ಯಕಾರ್ಯನಿರ್ವಾಹಕರಾದ ಮಹಮ್ಮದ ಅಸ್ಲಂ ಎಮ್. ಮುಗದ ವಾಚಿಸಿ, 2023-24ನೇ ಸಾಲಿನಲ್ಲಿ ಸಂಘವು 16.41ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷರಾದ ವಾಸುದೇವ ನಾರಾಯಣ ಗೌಡ ಅವರು ಮಾತನಾಡಿ ಸಂಘದ ಸರ್ವ ಸದಸ್ಯರ ಸಂಪೂರ್ಣವಾದ ಸಹಕಾರದಲ್ಲಿ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ಸ್ಥಳೀಯ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘವು ಆದ್ಯತೆಯಡಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಆಡಳಿತ ಮಂಡಳಿಯ ಸದಸ್ಯರ ಸಹಕಾರದ ಜೊತೆಗೆ ಕೆಡಿಸಿಸಿ ಬ್ಯಾಂಕಿನ ಮಾರ್ಗದರ್ಶನವು ಸಂಘದ ಪೂರ್ವ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿ ಸಂಘದ ಪ್ರಗತಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸಾಲ ಸೌಲಭ್ಯಗಳ ಬಗ್ಗೆ ರೈತರಿಗೆ ಹಾಗೂ ಶೇರುದಾರ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ವಿಶೇಷ ಸಾಧನೆಗೈದ ಶಿವಪೂರ ಗ್ರಾಮದ ಪ್ರಸ್ತುತ ಮೂಡಬಿದ್ರೆಯ ಅಳ್ವಾಸ್ ಕಾಲೇಜಿನ ಪ್ರತಿಭಾವಂತ ವಿಧ್ಯಾರ್ಥಿನಿಯಾದ ಕು. ದೀಕ್ಷಿತಾ ರಾಮಕೃಷ್ಣ ಗೌಡ ಇವಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷರಾದ ಸೋಮಣ್ಣಾ ಬುದೊ ಹನೊಲ್ಕರ, ಸಂಘದ ಸದಸ್ಯರುಗಳಾದ ಶಿವರಾಮ ಗಣಪತಿ ಹೆಬ್ಬಾರ, ದಾಮೋದರ ರಾಮಾ ಗೌಡ, ಅಬ್ದುಲ ಜುಬೇರ ಶೇಖ, ಲಿಂಗಣ್ಣಾ ತಿಮ್ಮಣ್ಣಾ ಗೌಡ, ರಾಜಾರಾಮ ಬಾಳಾಜಿ ದೇಸಾಯಿ, ಅಮಿರುಲ್ಲಾ ಕರಿಮ ಖಾನ, ವಿಶ್ವೇಶ್ವರ ಕೃಷ್ಣ ಸಿದ್ದಿ, ಸಾವಿತ್ರಿ ದಾಮೋದರ ಗೌಡ, ಪ್ರತಿಕ್ಷಾ ಪ್ರೇಮಾನಂದ ನಾಯ್ಕ, ಉಳವಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುನಾಥ ಅರ್ಜುನ ಮುಕಾಶಿ ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತು ಜಿಲ್ಲಾ ಕಿಸಾನ್ ಸಂಘದ ಉಪಾದ್ಯಕ್ಷರಾದ ಗೋಪಾಲ ಪದ್ಮನಾಭ ಭಟ್ಟ, ಪಿ.ಎಲ್.ಡಿ.ಬ್ಯಾಂಕಿನ ಸದಸ್ಯರಾದ ಶ್ರೀಧರ ಗೋಪಾಲಕೃಷ್ಣ ಹೆಗಡೆ, ಉಳವಿ ಗ್ರಾಮದ ಮಜಿದ ಖಾನ, ರೈತ ಸದಸ್ಯರು ಹಾಗೂ ಊರ ನಾಗರಿಕರು ಹಾಜರಿದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಕರಾದ ಮಹಮ್ಮದ ಅಸ್ಲಂ ಎಮ್.ಮುಗದ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.