ಕಾರವಾರ: ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ, ಪರಿಸರವನ್ನು ಮಲಿನಗೊಳಿಸುವವರಿಗೆ ದಂಡ ವಿಧಿಸುವ ಅವಕಾಶಗಳಿದ್ದು, ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಬಳಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯ ಕುಮಾರ ಹೇಳಿದರು.
ಅವರು ಬುಧವಾರ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ , ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಂಧೀಜಿಯವರು ದೇಶದ ಜನತೆಗೆ ನೂರು ವರ್ಷಗಳ ಪೂರ್ವದಲ್ಲೇ ನೈತಿಕತೆ ಮತ್ತು ಸ್ವಚ್ಛತೆ ಬಗ್ಗೆ ಮಾರ್ಗದರ್ಶನ ನೀಡಿದರು, ಅವರು ನೀಡಿದ ಮಾರ್ಗದರ್ಶನದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು. ಪ್ರಸ್ತುತ ಸಮಾಜದಲ್ಲಿ ಬಹುತೇಕ ವಿದ್ಯಾವಂತರೆ ಇರುವುದರಿಂದ ನಮ್ಮ ಸುತ್ತಮುತ್ತಳಿನ ಸ್ಥಳವನ್ನು ಸ್ವಚ್ಛತೆಯಾಗಿ ಇಟ್ಟುಕೊಂಡು ನಗರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ನಗರದಲ್ಲಿ ಎಲ್ಲಾದರೂ ಕಸ ಬಿದ್ದಿದ್ದರೇ ಅದನ್ನು ನೋಡಿಯೂ ಹಾಗೇ ಹೊಗದೇ ಸ್ವ ಇಚ್ಛೆಯಿಂದ ಕಸವನ್ನು ತೆರವುಗೊಳಿಸಲು ಮುಂದಾಗುವ ಮನೋಭಾವವನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಎಂ., ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಪೌರಾಯುಕ್ತ ಜಗದೀಶ್ ಹುಲಗಜ್ಜಿ ಮತ್ತಿತರರು ಇದ್ದರು.