ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ “ಪಿಡಿಒ ಆಫ್ ದಿ ಮಂತ್” ಪ್ರಶಸ್ತಿಗೆ , ಆಗಸ್ಟ್ ತಿಂಗಳಿಗೆ ಆಯ್ಕೆಯಾದ ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಹುರಕಡ್ಲಿ ಅವರಿಗೆ ಸೋಮವಾರ ಕಾರವಾರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.
ಪ್ರಶಸ್ತಿ ಪಡೆದು ಮಾತನಾಡಿದ ಮಹಾಂತೇಶ್ ತಳಮಟ್ಟದಲ್ಲಿ ಹಲವಾರು ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸುವ ನಮ್ಮಂತವರಿಗೆ, ನಮ್ಮ ಪರಿಶ್ರಮವನ್ನು ಗುರುತಿಸಿ, ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಜನರಿಗೆ ಸೇವೆ ನೀಡಲು ಪ್ರಯತ್ನಿಸುತ್ತೇನೆ. ಮಾರ್ಗದರ್ಶನ ನೀಡಿ, ಸಹಕರಿಸಿದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ಮಹಾಂತೇಶ್ ಹುರಕಡ್ಲಿ ಅವರು, ಬಿ.ಎಸಿ. ಪದವಿ ಪಡೆದು, 2018 ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆಗೆ ಸೇರಿದ್ದು, 2021-22 ರಲ್ಲಿ ಜಿಲ್ಲಾ ಮಟ್ಟದ ನೈರ್ಮಲ್ಯ ಪ್ರಶಸ್ತಿ, 2021-22 ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ, 2022-23 ರಲ್ಲಿ ವಿಶೇಷ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಅಭಿವೃದ್ಧಿ ಶಾಖೆ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ ಉಪಸ್ಥಿತರಿದ್ದರು.