ಸಿದ್ದಾಪುರ: ಜಿಲ್ಲೆಯಲ್ಲಿ ಓಸಿ ಮಟಕ ಹಾಗೂ ಅಂದರ್ ಬಾಹರ್ ಇಸ್ಪೀಟ್ ಆಟ ಸಂಪೂರ್ಣವಾಗಿ ಬಂದ್ ಮಾಡಿಸುವಲ್ಲಿ ಉತ್ತರಕನ್ನಡ ಜಿಲ್ಲೆ ಎಸ್ಪಿ ನಾರಾಯಣ. ಎಂ ಪಣತೊಟ್ಟಿರುವಾಗ ಸಿದ್ದಾಪುರ ಗಡಿಭಾಗವಾದ ಚೂರಿಕಟ್ಟೆ ಹಾಗೂ ತಾಳಗುಪ್ಪ ಗಡಿಭಾಗದಲ್ಲಿ ರಾಜಾರೋಷವಾಗಿ ಅಂದರ್ ಬಾಹರ್ ಇಸ್ಪೀಟ್ ಆಟ ಈಗಲೂ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ.
ಇಲ್ಲಿ ಶಿರಸಿ ಸಿದ್ದಾಪುರ ಕುಮಟಾ ಹೊನ್ನಾವರ ಹಾಗೂ ಸಾಗರ, ಶಿವಮೊಗ್ಗ, ಶಿಕಾರಿಪುರ, ಸೊರಬ ಕಡೆಗಳಿಂದಲೂ ಜನರು ಬರುತ್ತಿದ್ದು ಇಸ್ಪೀಟ್ ಆಟಕ್ಕೆ ಆಡಲು ಬರುವ ಜನರಿಗೆ ಇಲ್ಲಿ ವಿಶೇಷವಾದ ಭೋಜನ ವ್ಯವಸ್ಥೆ ಹಾಗೂ ಅವರ ವಾಹನ ನಿಲುಗಡೆಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದಿದೆ.
ಇಲ್ಲಿ ಇಸ್ಪೀಟ್ ಆಟ ನಡೆಸುವ ವ್ಯಕ್ತಿ ನಾನು ಬಹಳ ಪ್ರಭಾವಿ ಇದ್ದೇನೆ. ರಾಜಕೀಯ ಪ್ರಭಾವ ನನ್ನ ಹತ್ತಿರ ಇದೆ ಪೊಲೀಸ್ ಅಧಿಕಾರಿಗಳ ಪರಿಚಯ ಸಹ ನನಗೆ ಇದೆ ಎಂದು ಹೇಳಿ ರಾಜಾರೋಷವಾಗಿ ಇಸ್ಪೀಟ್ ಆಟ ನಡೆಸುತ್ತಿದ್ದಾನೆ ಎನ್ನುವುದು ಇಲ್ಲಿನ ಮಹಿಳಾ ಸಂಘಟನೆಗಳ ಆಪಾದನೆಯಾಗಿದೆ.
ಇದು ಜಿಲ್ಲೆಯ ಗಡಿಭಾಗವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯವರು ಇಸ್ಪೀಟ್ ಆಡಿಸುವ ಜಾಗ ಸಾಗರಕ್ಕೆ ಬರುತ್ತದೆ ಎಂದು ಜಾರಿಕೊಳ್ಳುತ್ತಿದ್ದರೆ, ಸಾಗರದವರು ಇದು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಸ್ಪೀಟಾಟ ಇಷ್ಟು ರಾಜರೋಷವಾಗಿ ನಡೆಯುತ್ತಿರುವ ನೋಡಿದರೆ ಇಸ್ಪೀಟ್ ಆಡಿಸುವ ವ್ಯಕ್ತಿ ಎಷ್ಟು ಪ್ರಭಾವಶಾಲಿ ಆಗಿರಬಹುದು ಎಂದು ಪ್ರಜ್ಞಾವಂತರು ಆಲೋಚಿಸುವಂತಾಗಿದೆ.
ಸಂಬಂಧಪಟ್ಟ ಠಾಣೆಯ ವ್ಯಾಪ್ತಿಯವರು ತಕ್ಷಣ ಕ್ರಮ ಕೈಗೊಂಡು ಈ ಇಸ್ಪೀಟ್ ಆಟವನ್ನು ನಿಲ್ಲಿಸಿ ಶಾಲಾ ವಿದ್ಯಾರ್ಥಿಗಳು ಬಡವರು ಈ ಆಟಕ್ಕೆ ಬಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುವಂತೆ ಈ ಇಸ್ಪೀಟ್ ಆಟ ನಡೆಸುವವನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಇಸ್ಪೀಟ್ ಅಡ್ಡೆ ನಡೆಸುವವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ತಮ್ಮ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕೆನ್ನು ವುದು ಬಹುತೇಕ ಈ ಆಟದಿಂದ ಹಣ ಕಳೆದುಕೊಂಡಿರುವ ಅನೇಕ ಕುಟುಂಬದ ಮಹಿಳೆಯರ ಅಳಲಾಗಿದೆ.