Slide
Slide
Slide
previous arrow
next arrow

ರೈತರಿಗೆ ಮೋಸ ಆರೋಪ; ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೇರಿ ಐವರ ಮೇಲೆ ಪ್ರಕರಣ ದಾಖಲು

300x250 AD

ಅಡಿಕೆ ಟೆಂಡರ್ ಗೋಲ್ ಮಾಲ್ ಆರೋಪದಲ್ಲಿ ಪ್ರಕರಣ | ರೈತರ ಬೆಳೆಗೆ ನ್ಯಾಯ ದೊರಕಿಸಲು ಆಗ್ರಹ

ಯಲ್ಲಾಪುರ: ಅಡಕೆ ಟೆಂಡರ್ ದರದಲ್ಲಿ ತಿದ್ದಿಪಡಿ ಮಾಡಿ, ರೈತರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿ ಟಿಎಸ್ಎಸ್ ಸಂಸ್ಥೆಯ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ರೈತರೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ಶಿರಸಿ ತಾಲೂಕಿನ ಬಿಳೂರಿನ ರೈತರಾದ ಮಂಜುನಾಥ ಲಕ್ಷ್ಮಣ ನಾಯ್ಕ, ಈಶ್ವರ ಫಕೀರಪ್ಪ ನಾಯ್ಕ, ಈರಪ್ಪ ನಾಗೇಶ ನಾಯ್ಕ ಹಾಗೂ ಉಲ್ಲಾಳಕೊಪ್ಪದ ಶ್ರೀಧರ ಭಟ್ಟ ಅವರು ಯಲ್ಲಾಪುರ ಟಿಎಸ್ಎಸ್ ಶಾಖೆಯಲ್ಲಿ ಕಳೆದ ಜುಲೈ 22 ರಂದು ಅಡಕೆಯನ್ನು ಟೆಂಡರ್ ಗೆ ಹಾಕಿದ್ದರು. ಇವರ ಲಾಟ್ ನಂಬರ್ 30, 35 ಹಾಗೂ 36 ಆಗಿದ್ದು, ಎಪಿಎಂಸಿಯಲ್ಲಿ 30 ನೇ ಲಾಟ್ ನಲ್ಲಿ ಅಡಕೆ 18,876 ರೂಗೆ ಹರಾಜು ಆಗಿತ್ತು. ಆದರೆ ಅದನ್ನು ಟಿಎಸ್ಎಸ್ ನಲ್ಲಿ 12,899 ರೂ ಎಂದು ತಿದ್ದುಪಡಿ ಮಾಡಿ, ಮೋಸ ಮಾಡಲಾಗಿದೆ. ಇದರಿಂದ ದಿನಕ್ಕೆ 1.56 ಲಕ್ಷ ರೂ. ರೈತರಿಗೆ ನಷ್ಟವಾಗಿದೆ. ಇದೇ ರೀತಿ ಹಲವು ರೈತರಿಗೆ ಸಂಸ್ಥೆಯಿಂದ ಮೋಸ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ರೈತರಿಗೆ ಮೋಸ ಮಾಡಿದ ಕಾರಣಕ್ಕಾಗಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ, ನಿರ್ದೇಶಕರಾದ ಸಂತೋಷ ಭಟ್ಟ ಹಳವಳ್ಳಿ, ಕೃಷ್ಣ ಹೆಗಡೆ ಜೂಜಿನಬೈಲ್, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ರೈತರು ದೂರು ನೀಡಿದ್ದಾರೆ. ಈ ಐವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪಿಎಸ್ಐ ನಿರಂಜನ ಹೆಗಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂದು ನಡೆದಿದ್ದೇನು ?
ಜುಲೈ 22 ರಂದು ರೈತರೊಬ್ಬರು ತಮ್ಮ ಅಡಿಕೆಯನ್ನು ಟೆಂಡರ್ ಮೂಲಕ ಮಾರಾಟಕ್ಕೆ ಹಾಕಿದ್ದರು. ಸಾಮಾನ್ಯವಾಗಿ ಗರಿಷ್ಠ ದರ ನಮೂದಿಸಿದ ವ್ಯಾಪಾರಸ್ಥರಿಗೆ ಅಡಿಕೆ ಮಾರಾಟವಾಗಬೇಕು. ಆ ಹಣ ರೈತರ ಖಾತೆಗೆ ಹೋಗಬೇಕು. ಆದರೆ ಇಲ್ಲಿ ನಡೆದಿದ್ದೇ ಬೇರೆ ಎನ್ನುವುದು ಆರೋಪ. ರೈತರ ಮಹಸೂಲನ್ನು ಗರಿಷ್ಠ ದರದ ಬದಲು ಅದಕ್ಕಿಂತ ಕಡಿಮೆ ಬರೆದವರಿಗೆ ಅಂದರೆ ಎರಡನೇ ಗರಿಷ್ಟ ದರಕ್ಕೆ ಮಾರಾಟ ಮಾಡಲಾಗಿದೆ. ಇದರಿಂದ ರೈತರುಗೆ ನೇರವಾಗಿ ಅನ್ಯಾಯ ಎಸಗಲಾಗಿದೆ ಮತ್ತು ವ್ಯಾಪಾರಸ್ಥರಿಗೆ ಲಾಭ ಮಾಡಿಕೊಡಲಾಗುತ್ತಿದೆ ಎಂದು ದೂರು ದಾಖಲಿಸಿದ ರೈತರ ಆರೋಪವಾಗಿದೆ.

300x250 AD

ರೈತರ ಸಂಸ್ಥೆಯಿಂದಲೇ ರೈತರಿಗೆ ಮೋಸ ?
ಯಾವುದೇ ಸಂಸ್ಥೆಯಿರಲಿ, ರೈತರಿಗೆ ಮೋಸ ಮಾಡುವ ವಿಚಾರವು ಒಂದು ಕ್ಷಣಕ್ಕೂ ಯಾರಿಗೂ ಬರಬಾರದು. ಅದರಲ್ಲಿಯೂ ತಮ್ಮ ವಯಕ್ತಿಕ ಲಾಭಕ್ಕಾಗಿ ತನ್ನದೇ ರೈತ ಸದಸ್ಯರಿಗೆ ಮೋಸ ಮಾಡುವ ಸಂಸ್ಥೆಯ ಆಡಳಿತ ಮಂಡಳಿಯ ನೈತಿಕತೆಯ ಪ್ರಶ್ನೆ ಎದ್ದು ಕಾಣುತ್ತದೆ. ಇಲ್ಲಿ ತಪ್ಪು ಯಾರದ್ದು ಎನ್ನುವ ವಿಷಯಕ್ಕಿಂತ ಮಾಡಿರುವ ತಪ್ಪಿನಿಂದ ಹಾನಿಗೊಳಗಾಗಿದ್ದು ರೈತ. ವರ್ಷದ ಕೂಳನ್ನು ನಂಬಿ ಸಂಸ್ಥೆಯ ಮೇಲಿನ ವಿಶ್ವಾಸದಿಂದ ರೈತ ತನ್ನ ಮಹಸೂಲನ್ನು ವಿಕ್ರಿ ಮಾಡುತ್ತಾನೆ. ಆದರೆ ಇಂತಹ ಸ್ವಾರ್ಥಿಗಳ ಲೋಕದಲ್ಲಿ ರೈತರಿಗೆ ನ್ಯಾಯ ಕೊಡಿಸುವವರ್ಯಾರು ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ತಪ್ಪು ಮಾಡಿರುವುದು ನಿಜವಾಗಿದ್ದರೇ ಅಂತವರಿಗೆ ಶಿಕ್ಷಯಾಗಬೇಕು. ಮತ್ತು ರೈತರಿಗೆ ನ್ಯಾಯ ದೊರಕಬೇಕೆನ್ನುವುದು ಎಲ್ಲರ ಕಳಕಳಿಯಾಗಿದೆ.


ಆಡಳಿತ ಮಂಡಳಿ ಗೆಣಸು ಕೀಳುತ್ತಿತ್ತೇ ?

ಪಾರದರ್ಶಕ ಆಡಳಿತ ನೀಡುತ್ತೇವೆ, ಭ್ರಷ್ಟರನ್ನು ಕಂಬಿ ಹಿಂದೆ ಕಳಿಸುತ್ತೇವೆ ಎನ್ನುವ ಕಪೋಲಕಲ್ಪಿತ ಘೋಷಣೆಯೊಂದಿಗೆ ವಾಮಮಾರ್ಗದಲ್ಲಿ ಅಧಿಕಾರಕ್ಕೇರಿದ್ದಾರೆ ಎನ್ನುವ ಆರೋಪ ಹೊತ್ತಿರುವ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ಹಾಲಿ ಆಡಳಿತ ಮಂಡಳಿ ಇಂತಹ ಕೃತ್ಯ ಅಥವಾ ವಿಚಾರಗಳನ್ನು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲವೇ ಎಂಬ ಅನುಮಾನ ರೈತರನ್ನು ಕಾಣುತ್ತಿದೆ. ಈ ವಿಷ್ಯದಲ್ಲಿ ಯಾವ ಆಡಳಿತ ಮಂಡಳಿ ಇದ್ದರೂ, ಇಂತಹ ಪ್ರಕರಣ ನಡೆದಿದ್ದರೂ ಅದು ತಪ್ಪೇ. ಅದರಲ್ಲಿಯೂ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ಪುಂಕಾನುಪುಂಕವಾಗಿ ಕಂಡಕಂಡಲ್ಲಿ ಪ್ರಖರ ಭಾಷಣ ಮಾಡಿ, ರಸ್ತೆ ಮೇಲೆ ಕಂಡವರ ಮೇಲೆಲ್ಲ ಸಂಸ್ಥೆಯ ಅದರಲ್ಲಿಯೂ ರೈತರ ದುಡ್ಡಲ್ಲಿ ಕೇಸ್ ಹಾಕಿ, ಹೆದರಿಸುವ ಪ್ರಯತ್ನ ಮಾಡುವುದನ್ನೇ ರೂಢಿಮಾಡಿಕೊಂಡು ಅಧಿಕಾರಕ್ಕೇರಿರುವ ಆಡಳಿತ ಮಂಡಳಿ ರೈತರಿಗೆ ಅನ್ಯಾಯ ಆಗುತ್ತಿರುವಾಗ ಅದನ್ನು ನೋಡದೇ ಇರುವುದು ಸಂಸ್ಥೆಯ ಕುರಿತಾದ ಇವರ ಬದ್ಧತೆಯನ್ನು ತೋರಿಸುತ್ತದೆ. ಅಥವಾ ಒಂದು ವೇಳೆ ವಿಷಯ ತಿಳಿದಿದ್ದೂ ಸುಮ್ಮನಿದ್ದರೆ ಅದು ರೈತರಿಗೆ ಮಾಡುವ ದ್ರೋಹವಾಗುತ್ತದೆ.

ಹಾಲಿ ಆಡಳಿತ ಮಂಡಳಿಗೆ ಸಂಸ್ಥೆಯ ಅಭಿವೃದ್ಧಿ, ರೈತರ ಕಾಳಜಿಗಿಂತ ತಮ್ಮ ಪ್ರತಿಷ್ಠೆ, ಅಧಿಕಾರದ ದುರಾಸೆಯೇ ಹೆಚ್ಚಾದಂತೆ ಕಾಣುತ್ತದೆ. ಆ ಕಾರಣಕ್ಕಾಗಿಯೇ ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನ ಹರಿಸುವ ಬದಲು, ಕಿಸೆಗೊಬ್ಬ ವಕೀಲರನ್ನು ನೇಮಿಸಿಕೊಂಡು ಸಂಸ್ಥೆಯ ಹಣದಲ್ಲಿ ದಿನಕ್ಕೊಂದು ಕೇಸ್ ಹಾಕುವುದು, ಅದನ್ನು ನಡೆಸುವುದೇ ಹಾಲಿ ಆಡಳಿತ ಮಂಡಳಿಯ ಅತಿದೊಡ್ಡ ಸಾಧನೆಯಾಗಿದೆ ಎಂಬುದು ಸಂಸ್ಥೆಯ ಸದಸ್ಯರೇ ಮಾತನಾಡಿಕೊಳ್ಳುತ್ತಿರುವ ವಿಚಾರ. ಹೀಗಿರುವಾಗ ಸಂಸ್ಥೆಯಲ್ಲಿ ಅಧಿಕಾರ, ದರ್ಪ ಚಲಾಯಿಸಲು ಒಬ್ಬ ಅಧ್ಯಕ್ಷ ಮತ್ತು ರೈತರ ಹಿತ ಕಾಪಾಡಲು ಇನ್ನೋರ್ವ ಅಧ್ಯಕ್ಷರ ಅವಶ್ಯಕತೆ ಇದ್ದಂತೆ ತೋರುತ್ತಿದೆ. ತಮ್ಮದೇ ಶಾಖೆಯಲ್ಲಿ ಇಂತಹ ಪ್ರಕರಣಗಳು ಬಹಳ ದಿನದಿಂದ ನಡೆಯುತ್ತಿರುವಾಗ ಅಧ್ಯಕ್ಷರನ್ನು ಒಳಗೊಂಡ ಆಡಳಿತ ಮಂಡಳಿ ಗೆಣಸು ಕೀಳುತ್ತಿತ್ತೇ ಎನ್ನುವ ಪ್ರಶ್ನೆ ರೈತ ವಲಯದಲ್ಲಿ ಕೇಳಿಬಂದಿದೆ.

Share This
300x250 AD
300x250 AD
300x250 AD
Back to top