ಬನವಾಸಿ: ಮಹಿಳೆಯರು ತಮ್ಮ ಕುಟುಂಬದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಪಡೆಯುವ ಉದ್ದೇಶದಿಂದ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಪಿ.ನಾಗರಾಜ ತಿಳಿಸಿದರು.
ಸಮೀಪದ ಅಜ್ಜರಣಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆರಂಭವಾದ ಶ್ರೀಗಂಧ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ 1982ರಲ್ಲಿ ಆರಂಭವಾಗಿ ಶ್ರೀ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಸಂಸ್ಥೆಯಾಗಿದೆ. ಇಂದು ರಾಜ್ಯಾದ್ಯಂತ ತನ್ನ ಸಾವಿರಾರು ಶಾಖೆಗಳನ್ನು ಹೊಂದಿದ್ದು, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಮಹಿಳೆಯರ ಆರ್ಥಿಕ, ಬೌದ್ಧಿಕ, ಸಾಮಾಜಿಕ ಬಡತನಗಳನ್ನು ದೂರಮಾಡುವ ದೃಷ್ಟಿಯಿಂದ ಜ್ಞಾನ ವಿಕಾಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರಿಗೆ ಸಂಘಟನೆಯ ಮೂಲಕ ಶಿಕ್ಷಣ, ಆರ್ಥಿಕ ನೆರವು ನೀಡಿ ನಿರಂತರ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳಾ ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ಮಲ್ಲಿಕಾ ಮಾತನಾಡಿ, ಸ್ತ್ರೀಶಕ್ತಿ ಸಬಲೀಕರಣದ ಉದ್ದೇಶದಿಂದ ಶ್ರೀಗಂಧ ಎನ್ನುವ ಹೆಸರಿನಲ್ಲಿ ಅಜ್ಜರಣಿ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರವನ್ನು ಆರಂಭಿಸಲಾಗಿದ್ದು. ಈ ಕೇಂದ್ರದ ಮೂಲಕ ಮಹಿಳೆಯರಿಗೆ ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಪೌಷ್ಟಿಕ ಆಹಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪರಿಣಿತರಿಂದ ಉಪನ್ಯಾಸ ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಬನವಾಸಿ ಪೋಲಿಸ್ ಠಾಣೆಯ ಆರಕ್ಷಕರಾದ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಡೆಸುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಅರ್ಥಪೂರ್ಣ ಮತ್ತು ಮಹಿಳೆಯರ ಬದುಕಿಗೆ ಆಶಾದಾಯಕವಾಗಿದೆ ಎಂದರು. ಒಕ್ಕೂಟದ ಉಪಾಧ್ಯಕ್ಷೆ ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಗುಡ್ನಾಪುರ ಗ್ರಾಪಂ ಸದಸ್ಯೆ ಚೆನ್ನಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸಾರ್ವಜನಿಕರು ಇದ್ದರು. ಸೇವಾ ಪ್ರತಿನಿಧಿ ಸವಿತಾ ಆಚಾರಿ ನಿರೂಪಿಸಿದರು. ವೀಣಾ ಸ್ವಾಗತಿಸಿದರು. ಕಾವ್ಯ ವಂದಿಸಿದರು.