ಸಿದ್ದಾಪುರ: ಐದಕ್ಕೂ ಅಧಿಕ ಗ್ರಾಮ ಹಾಗೂ ರೈತರ ತೋಟಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಸಣ್ಣಗಮನಿ ರಸ್ತೆ ಕುಸಿದು ಸಂಚಾರಕ್ಕೆ ಸಂಚಕಾರ ತರಲಿದ್ದು, ತಕ್ಷಣ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸಿದ್ದಾಪುರ ತಾಲೂಕಿನ ತ್ಯಾರ್ಸಿಯಿಂದ ಪ್ರಾರಂಭವಾಗುವ ಈ ರಸ್ತೆ ಸಣ್ಣಗಮನಿ, ಕರಮನೆ, ಕಲ್ಲಾರೆಮನೆ, ಭಾನ್ಕುಳಿ, ವಾಜಗಾರ, ಹುಲಿಮನೆ, ಸಂಪೇಸರ ಹಾಗೂ ಬೇಡ್ಕಣಿಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ಇದಾಗಿದೆ. ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಧರೆ ಕುಸಿದು ರಸ್ತೆ ಸಹ ಕುಸಿದಿದೆ. ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ದಿನೇ ದಿನೇ ಕುಸಿಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಮಾರ್ಗ ಬೇಡ್ಕಣಿ ಹಾಗೂ ಬಿದ್ರಕಾನ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುತ್ತಿದೆ. ಕುಸಿದ ರಸ್ತೆ ಬೇಡ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತಿದ್ದು, ಪಿಡಿಓ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಗಮನ ಹರಿಸಿ ತುರ್ತು ದುರಸ್ಥಿ ಮಾಡಬೇಕಿದೆ.
ಈ ಭಾಗದಲ್ಲಿ ತ್ಯಾರ್ಸಿ, ಕಡಕೇರಿ ಗ್ರಾಮದ ರೈತರ ತೋಟಗಳು ಸಹ ಬರುತ್ತಿದ್ದು, ಮಳೆಗಾಲದಲ್ಲಿ ಅಡಿಕೆಗೆ ಕೊಳೆ ರೋಗ ಹರಡಿರುವುದರಿಂದ ಪ್ರತಿ ದಿನ ರೈತರು ತೋಟಕ್ಕೆ ಹೋಗುವುದು ಅನಿವಾರ್ಯವಾಗಿದೆ. ಜತೆಗೆ ಸಣ್ಣಗಮನಿ, ಭಾನ್ಕುಳಿ, ಕರಮನೆ, ಕಲ್ಲಾರಮನೆ, ವಾಜಗಾರಿಗೆ ಹೋಗುವ ಮಾರ್ಗ ಇದಾಗಿರುವುದರಿಂದ ರಸ್ತೆ ಸಂಪೂರ್ಣ ಕುಸಿದರೆ ಜನಜೀವನದ ಮೇಲೆ ತುಂಬಾ ಪರಿಣಾಮ ಬೀರಲಿದೆ. ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಸಂಚರಿಸುವುದರಿಂದ ಅಪಾಯ ಎದುರಾಗುವ ಮುನ್ನ ಸಂಬಂಧಪಟ್ಟ ಗ್ರಾಮ ಪಂಚಾಯ್ತಿ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.