ಜು.24ರಂದು ವರದಿ ಮಾಡಿದ್ದ e – ಉತ್ತರ ಕನ್ನಡ | ದುರಸ್ತಿಯ ಜೊತೆಗೆ ಶಾಶ್ವತ ಪರಿಹಾರಕ್ಕೆ ಚಿಂತನೆ
ಸುಧೀರ ನಾಯರ್
ಬನವಾಸಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯರಾಣಿ ಮಂಗಳವಾರ ಭೇಟಿ ನೀಡಿ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ವೀಕ್ಷಣೆ ಮಾಡಿದರು.
ನಿರಂತರ ಮಳೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿದ್ದು ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಪರದಾಡು ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 50- 60 ವರ್ಷ ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡು ಮಳೆಗಾಲದಲ್ಲಿ ಎಲ್ಲ ಕಡೆಗಳಲ್ಲಿ ಸೋರುತ್ತಿದೆ. ಈ ಕುರಿತು ಜು. 24ರಂದು e -ಉತ್ತರ ಕನ್ನಡ ಪತ್ರಿಕೆ ಸುದ್ದಿ ಮಾಡುವ ಮೂಲಕ ಬೆಳಕು ಚೆಲ್ಲಿತ್ತು. ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸಹಾಯಕ ಆಯುಕ್ತರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಗಬೇಕಾದ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೊರ ರೋಗಿಗಳ ಸಂಖ್ಯೆಯಿರುವ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯನ್ನು ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು ಸೋರುವಿಕೆಯ ಸಮಸ್ಯೆಯಿಂದಾಗಿ ಬಹಳ ತೊಂದರೆ ಅನುಭವಿಸುವಂತಾಗಿತ್ತು. ವೃದ್ದರು, ಗರ್ಭಿಣಿಯರು, ಮಕ್ಕಳು ಕುಳಿತು ಕೊಳ್ಳಲು ಸಾಧ್ಯವಾಗದೇ ಗಂಟೆಗಟ್ಟಲೆ ನಿಂತುಕೊಂಡೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.
ನಿರಂತರ ಮಳೆಯಿಂದಾಗಿ ವೈದ್ಯಾಧಿಕಾರಿಗಳ ಕೊಠಡಿ, ರೋಗಿಗಳು ಕುಳಿತು ಕೊಳ್ಳುವ ಆಸ್ಪತ್ರೆಯ ಆವರಣ, ವಾಡ್೯ನ ಕೋಣೆಯ ಮುಂಭಾಗದಲ್ಲಿ ಮಳೆ ನೀರು ಬಹಳಷ್ಟು ಸೋರುತ್ತಿದೆ. ಆರೋಗ್ಯ ಕೇಂದ್ರದ ಒಳ ಭಾಗದಲ್ಲಿ ಕೆಲವು ಕಡೆ ಟೈಲ್ಸ್ ಅವಳವಡಿಕೆ ಮಾಡಿರುವುದರಿಂದ ವೃದ್ದರು, ಗರ್ಭಿಣಿಯರು ನಡೆದಾಡಲು ತೊಂದರೆ ಅನುಭವಿಸುತ್ತಿದ್ದು, ಕರ್ತವ್ಯ ನಿರ್ವಹಿಸುವ ಆಸ್ಪತ್ರೆಯ ಸಿಬ್ಬಂದಿಗಳು ಭಯದಿಂದಲೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಆಯುಕ್ತೆ ಕೆ.ವಿ.ಕಾವ್ಯರಾಣಿ ಮಾತನಾಡಿ, ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನೋಡಿ ಈ ದಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದೆವೆ. ಹಳೆಯದಾದ ಕಟ್ಟಡವಾಗಿರುವುದರಿಂದ ಬಹಳಷ್ಟು ಸೋರುತ್ತಿದೆ. ರಾಜ್ಯ ಸರ್ಕಾರ ಎಸ್.ಡಿ.ಪಿ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ನಿಲಯಗಳ ದುರಸ್ತಿಗಾಗಿ 40 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಆರೋಗ್ಯ ಅಧಿಕಾರಿ ಹಾಗೂ ಸಹಾಯಕ ಅಭಿಯಂತರರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುವುದು. ಮಳೆಗಾಲವಾಗಿರುವುದರಿಂದ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಗ್ರಾಮ ಪಂಚಾಯಿತಿಯಿಂದಾ ನಿರ್ಮಾಣ ಮಾಡಿರುವ ಇಕೋ ಪಾರ್ಕ್ ನ ಅವ್ಯವಸ್ಥೆ ಕಂಡು ಸರಿಯಾದ ನಿರ್ವಹಣೆ ಮಾಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಕೋಟ್:
ಪ್ರಾಥಮಿಕ ಆರೋಗ್ಯ ಕೇಂದ್ರವೂ ಸೋರುತ್ತಿರುವುದರಿಂದ ರೋಗಿಗಳಿಗೆ, ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿತ್ತು. ಆರೋಗ್ಯ ಕೇಂದ್ರದ ದುರಸ್ತಿಗಾಗಿ ಎಸ್.ಡಿ.ಪಿ ಅನುದಾನದಲ್ಲಿ ರಾಜ್ಯ ಸರ್ಕಾರ 40ಲಕ್ಷ ರೂ.ಗಳನ್ನು ಮಂಜೂರು ಮಾಡಿರುವುದು ಸಂತಸವಾಗಿದೆ. ಸಮಾಜಮುಖಿ ಸುದ್ದಿ ಪ್ರಕಟಿಸಿದ e- ಉತ್ತರ ಕನ್ನಡ ಪತ್ರಿಕೆಯ ಕಾರ್ಯ ಶ್ಲಾಘನೀಯ.– ಶಾಂತಲಾ ಕಾನಳ್ಳಿ
ಬನವಾಸಿ ನಿವಾಸಿ