ಹೊನ್ನಾವರ: ರಂಗಭೂಮಿ ಕಲಾವಿದ, ನಿವೃತ್ತ ಶಿಕ್ಷಕ ಮುಗ್ವಾದ ಎನ್.ಎಂ.ನಾಯ್ಕ (೮೯) ವಯೋಸಹಜ ಅನಾರೋಗ್ಯದಿಂದ ಶನಿವಾರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ತಾಲೂಕಿನ ನಗರೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕುಮಟಾ, ಸಿದ್ದಾಪುರ, ಹಾಗೂ ತಾಲೂಕಿನ ವಿವಿಧ ಕಡೆ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ರಂಗ ಭೂಮಿ ಕಲಾವಿದರಾಗಿದ್ದ ಅವರು ಕೊಂಕಣಿ ರಂಗಭೂಮಿ ದಿಗ್ಗಜ ಬಾಬುಟಿ ನಾಯಕ್ ಹೊಸಾಡ ಹಾಗೂ ಜಿ.ಯು. ಭಟ್, ಜಿ.ಎಸ್. ಅವಧಾನಿ, ಆರ್.ವಿ. ಭಂಡಾರಿ, ಜಿ. ಆರ್. ಭಟ್ ಬಾಳೇಗದ್ದೆ ಜೊತೆಗೂಡಿ ತಾಲೂಕಿನಲ್ಲಿ ಹಲವು ದಶಕಗಳ ಕಾಲ ರಂಗಭೂಮಿ ಚಟುವಟಿಕೆಗಳನ್ನು ಸಂಘಟಿಸಿದ್ದರು. ಮುಗ್ವಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ದೀರ್ಘ ಕಾಲ ಕಾರ್ಯ ನಿರ್ವವಹಿಸಿದ್ದರು.
ಅವರಿಗೆ ಪುತ್ರಿಯರಾದ ನಿವೃತ್ತ ಮುಖ್ಯಾಧ್ಯಾಪಕಿ ಕಮಲಾ ನಾಯ್ಕ, ವಿಜ್ಞಾನಿ ಹೇಮಾ ನಾಯ್ಕ, ಎಂ.ಎನ್.ಸುಜಾತಾ ಹಾಗೂ ಪುತ್ರ ವಕೀಲ ಎಂ. ಎನ್. ಸುಬ್ರಹ್ಮಣ್ಯ ಹಾಗೂ ಅಪಾರ ಬಂಧು ಬಳಗ ಇದ್ದಾರೆ.