ಇದೇ ಮೊದಲ ಬಾರಿಗೆ ಹಸಿರು ಸಂತೆ ಆಯೋಜನೆ | ಗುಣಮಟ್ಟದಿಂದ ರೈತರ ಗಮನ ಸೆಳೆತ
ಕಳೆದ 50 ವರ್ಷಗಳಿಂದ ಜಿಲ್ಲೆಯ ರೈತರ ಕೃಷಿಮಿತ್ರನಾಗಿ, ಕೃಷಿ ಉಪಕರಣಗಳ ಮಾರಾಟ ಮತ್ತು ರಿಪೇರಿ ವಿಭಾಗದಲ್ಲಿ ಅಗ್ರ ಸೇವೆ ನೀಡುವ ಮೂಲಕ ಕೃಷಿಕರ ಬೆನ್ನೆಲುಬಾಗಿ ಕೆಲಸ ಮಾಡುತ್ತಿರುವ ಶಿರಸಿಯ ದಿ ಅಗ್ರಿಕಲ್ಚರಲ್ ಸರ್ವೀಸ್ ಎಂಡ್ ಡೆವಲಪ್ಮೆಂಟ್ ಕೋ.ಆಪ್. ಸೊಸೈಟಿ ಲಿ.,(ಡೆವಲಪ್ಮೆಂಟ್ ಸೊಸೈಟಿ) ಇದೇ ಮೊದಲ ಬಾರಿಗೆ ತನ್ನ ಸದಸ್ಯರಿಗಾಗಿ ಮತ್ತು ಸಾರ್ವಜನಿಕರಿಗಾಗಿ ಹಸಿರು ಸಂತೆಯನ್ನು ಆಯೋಜಿಸಿದೆ. ಈಗಾಗಲೇ ಅನೇಕ ಸಹಕಾರಿ ಸಂಸ್ಥೆಗಳು ಸಸ್ಯ ಸಂತೆಯನ್ನು ಆಯೋಜಿಸಿ ಯಶಸ್ಸು ಪಡೆದಿದ್ದು, ಗುಣಮಟ್ಟದ, ವಿಶ್ವಾಸನೀಯ ಸಸಿಗಳನ್ನು ರೈತರಿಗೆ ನೀಡುವ ಸದುದ್ಧೇಶದಿಂದ ಇದೀಗ ಡೆವಲಪ್ಮೆಂಟ್ ಸೊಸೈಟಿಯೂ ಹಸಿರು ಸಂತೆಯ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿದೆ.
ಹಸಿರು ಸಂತೆಯಲ್ಲಿ ಏನೇನಿದೆ:
ಮಾವು, ಹಲಸು, ಚಿಕ್ಕು, ಪೇರಲೆ, ವಾಟರ್ ಆ್ಯಪಲ್, ಅಂಜೂರ, ರಾಂಬೂತಾನ್, ಮುರುಗಲು, ಬೆಣ್ಣೆಹಣ್ಣು, ನೇರಲೆ, ರಾಮಫಲ, ಲಕ್ಷ್ಮಣಫಲ, ಸೀತಾಫಲ ಸೇರಿದಂತೆ ವಿವಿಧ ಹಣ್ಣಿನ ಗಿಡಗಳಿವೆ. ಜೊತೆಗೆ ತೆಂಗು, ಕಾಳುಮೆಣಸು (ಬುಷ್ ಪೆಪ್ಪರ್) ನಿಂಬೆ ಸಸಿಗಳ ಜೊತೆಗೆ ಮಹಿಳೆಯರ ಅಚ್ಚುಮೆಚ್ಚಿನ ವಿವಿಧ ಬಣ್ಣದ, ತಳಿಯ ಗುಲಾಬಿ ಗಿಡಗಳು ಪ್ರಮುಖ ಆಕರ್ಷಣೆಯಾಗಿದೆ.
ಹಸಿರು ಸಂತೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಿಡಗಳು ಸಿಗಲಿ ಎಂಬ ಕಾರಣದಿಂದ ಇದೇ ಮೊದಲ ಬಾರಿಗೆ ನಮ್ಮಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಜನರು ಗಿಡ ಬೆಳೆಸುವ ಪ್ರವೃತ್ತಿ ಬೆಳೆಸುವ ಉದ್ಧೇಶ ನಮ್ಮದು. ಮುಂದಿನ ಪೀಳಿಗೆಗೆ ನಾವು ಹಸಿರಿನ ಉಸಿರನ್ನು ಕೊಡುವಂತಾಗಬೇಕು. ನಾಡು ಹಸಿರಾಗುವ ಮೂಲಕ ಕೃಷಿಕರ ಬದುಕೂ ಸಹ ಹಸಿರಾಗಲಿ.– ಗೋಪಾಲ ಹೆಗಡೆ, ಮುಖ್ಯಕಾರ್ಯನಿರ್ವಹಣಾಧಿಕಾರಿ
ಹಸಿರು ಸಂತೆಯ ಮೂಲಕ ರೈತರಿಗೆ ಗುಣಮಟ್ಟದ ಸಸಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ರೈತರು ಇಂದು ನಮ್ಮಿಂದ ಒಯ್ದು, ನಾಟಿ ಮಾಡುವ ಸಸಿ ಅವರಿಗೆ ಒಳ್ಳೆಯ ಫಲವನ್ನು ನೀಡಬೇಕು. ಹಾಗಾದಾಗ ಈ ಹಸಿರು ಸಂತೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ನಮ್ಮ ಭಾಗದ ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಿ.–ಭಾಸ್ಕರ ಹೆಗಡೆ ಕಾಗೇರಿ, ಅಧ್ಯಕ್ಷರು
15ಕ್ಕೂ ಅಧಿಕ ತಳಿಯ ಮಾವು: ಹಸಿರು ಸಂತೆಯಲ್ಲಿ ಮಿಯಾಜಾಕಿ, ಅಮೇರಿಕನ್ ರೆಡ್, ನಮ್ ಡೆಕ್ ಮಯಿ, ರೆಡ್ ಐವರಿ, ಓಷ್ಟಿನ್, ಚಕ್ಪತ್, ಆಪೂಸ್, ಸಿಂಧೂರ, ಬಾದಾಮ್, ಅಪ್ಪೆಮಿಡಿ ಒಳಗೊಂಡ ವಿವಿಧ ಬಗೆಯ ಮಾವಿನ ಗಿಡಗಳು ಮಾರಾಟಕ್ಕೆ ಲಭ್ಯವಿದೆ.
ಹಲಸಿನಲ್ಲಿ ಗಮ್ ಲೆಸ್, ಸೀಡ್ ಲೆಸ್, ಸಿಂಧೂರ ರೆಡ್, ಸಿದ್ದು, ಸೂಪರ್ ಅರ್ಲಿ, ರುದ್ರಾಕ್ಷಿ ಬಕ್ಕೆ ಒಳಗೊಂಡ ಹಲಸಿನ ತಳಿಗಳು ಜನರನ್ನು ಆಕರ್ಷಿಸುತ್ತಿದೆ.