ದಾಂಡೇಲಿ: ಯಕ್ಷ ರಂಗದ ಸುಮಧುರ ಕಂಠದ ಭಾಗವತ, ಗಾನ ಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ ಅಗಲುವಿಕೆ ನಾಡಿನ ಯಕ್ಷಗಾನ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಸಂತಾಪ ಸೂಚಿಸಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾಗಿರುವ ಇವರು ತಮ್ಮ ಸರಳ ಸಜ್ಜನಿಕೆಯ ಮೂಲಕವೇ ಎಲ್ಲರ ಪ್ರೀತಿ ಗಳಿಸಿದವರು. ಬಡಗುತಿಟ್ಟಿನ ತಮ್ಮ ವಿಶಿಷ್ಟವಾದ ಭಾಗವತಿಕೆಯ ಮೂಲಕ ಯಕ್ಷಗಾನಕ್ಕೆ ಹೊಸತೊಂದು ಮೆರೆಗನ್ನ ಲೇಪಿಸಿದವರು. ಇವರ ಇಂಪಾದ ಮೆಲುದನಿಗೆ ಮನ ಸೋಲದವರಿಲ್ಲ. ಕಲೆಯ ಜೊತೆಗೆ ಜೀವನ ಪ್ರೀತಿಯನ್ನು ಕೊಟ್ಟವರು. ಯಕ್ಷಗಾನದಲ್ಲಿ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದವರು ಮತ್ತು ಬೆಳೆಸಿದವರು.
ಇತ್ತೀಚೆಗಷ್ಟೇ ಕುಮಟಾದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ಮುರೂರು ರಮೇಶ್ ಬಂಡಾರಿಯವರು ಧಾರೇಶ್ವರವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ನಾನು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರನ್ನು ಗೌರವಿಸಿದ್ದು, ಆ ಸಂದರ್ಭದಲ್ಲಿ ಅವರು ತೋರಿದ ಪ್ರೀತಿ ಮರೆಯುವಂತದ್ದಲ್ಲ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಹಲವಾರು ಗೌರವಗಳನ್ನು ಹೊದ್ದುಕೊಂಡಿರುವ ಧಾರೇಶ್ವರರು ನಮಗೊಂದು ಹೆಮ್ಮೆಯಾಗಿದ್ದರು.
ಇವರ ಅಗಲುವಿಕೆ ಉತ್ತರ ಕನ್ನಡ ಜಿಲ್ಲೆಗಷ್ಟೇ ಅಲ್ಲ, ಇಡೀ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದಿರುವ ಬಿ.ಎನ್. ವಾಸರೆ ಗಾನ ನಿಲ್ಲಿಸಿದ ಗಾನ ಗಾರುಡಿಗನ ಸ್ಮರಿಸುವ ಕೆಲಸ ಜಿಲ್ಲೆಯಾದ್ಯಂತ ಕಸಾಪದಿಂದ ಆಗಲಿದೆ ಎಂದಿದ್ದಾರೆ.