ಜೊಯಿಡಾ: ಅತ್ಯಂತ ಬಿರುಬೇಸಿಗೆಯಿಂದ ತಾಲೂಕಿನ ಜನತೆ ಬೆಂದು ಹೋಗಿದ್ದಾರೆ. ಹಿಂದೆಂದೂ ಕಂಡರಿಯದಂತಹ ಬಿಸಿಗಾಳಿಗೆ ತತ್ತರಿಸಿದ್ದಾರೆ. ಇದು ಹೇರಳ ಕಾಡನ್ನು ಹೊಂದಿರುವ ಜೊಯಿಡಾ ತಾಲ್ಲೂಕಿನ ಸ್ಥಿತಿಯಾಗಿದೆ.
ತಾಲೂಕನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸಲಾಗಿದೆ. ಆದರೆ ಬರಗಾಲದ ಯಾವುದೇ ನೆರವು ತಾಲೂಕಿನ ರೈತರಿಗೆ ಬಡವರಿಗೆ ಸಿಗಲಿಲ್ಲ. ಬಿರು ಬೇಸಿಗೆ ಮಾತ್ರ 36 ರಿಂದ 42 ಡಿಗ್ರೀ ಸೆಂಟಿಗ್ರೇಡ್ ವರೆಗೆ ತಾಪಮಾನ ಹೆಚ್ಚಿಸಿದ್ದು ನೀರು ಅವಲಂಬಿಸಿದ ಗಿಡಮರಗಳು ತೋಟ ಪಟ್ಟಿಗಳು ಒಣಗಿ ನಿಂತಿವೆ.
ಕುಡಿಯುವ ನೀರು – ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಇದ್ದು ಸ್ಥಳೀಯರು ತಮ್ಮ ನೀರಿನ ಬಳಕೆಯನ್ನು ಮಿತಿಗೊಳಿಸಿದ್ದು ಇದ್ದುದರಲ್ಲಿಯೇ ದಿನ ದೂಡುತ್ತಿದ್ದಾರೆ. ರಾಮನಗರದಲ್ಲಿ ತಿಂಗಳಿಗೆ 4 ಸಲ ಮಾತ್ರ ನೀರನ್ನು ಬಿಡಲಾಗುತ್ತಿದೆ. ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಬಂದಾಗ ಆಡಳಿತಕ್ಕೆ ದೂರಿ , ದೂರಿ ಜನ ಸೋತು ಹೋಗಿದ್ದಾರೆ. ಹಲವಾರು ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದರೂ , ಸಮಸ್ಯೆಗೆ ಪರಿಹಾರ ಮಾತ್ರ ಕಂಡು ಬಾರದಿರುವ ಕಾರಣ ಜನತೆಗೆ ಮೌನಕ್ಕೆ ಜಾರಿದ್ದಾರೆ. ಯಾವ ಯೋಜನೆಗಳೂ ತಾಲೂಕಿನ ಜನತೆಗೆ ನೆರವಿಗೆ ಬಾರದಿದ್ದರೂ ದಾಂಡೇಲಿ , ಹಳಿಯಾಳ , ಸೇರಿದಂತೆ ಹೊರ ಜಿಲ್ಲೆಗಳಿಗಳಿಗೂ ಕಾಳಿ ನದಿಯ ನೀರು ನಿರಂತರವಾಗಿ ಹರಿಯುತ್ತಿದೆ.
ಇಚ್ಛಾಶಕ್ತಿ ಕೊರತೆ:
ತಾಲೂಕಿಗೆ ನೀರು ಸರಿಯಾಗಿ ಕೊಡಲು ಆಗದ ಆಡಳಿತ ಹೊರಗೆಲ್ಲ ನೀರು ಕೊಡುತ್ತಿದೆ. ಈ ಸಲದ ಚುನಾವಣೆಯಲ್ಲಿ ಆಡಳಿತಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮತದಾರರು ಚರ್ಚಿಸುತ್ತಿರುವುದು ಕಂಡುಬಂದಿದೆ.
ಕುಡಿಯುವ ನೀರು , ಇಲಾಖೆ ಸಣ್ಣ ನೀರಾವರಿ ಇಲಾಖೆ ಪ್ರತಿ ವರ್ಷ ಕೋಟಿ ಕೋಟಿ ಹಣವನ್ನು ವಿನಿಯೋಜಿಸುತ್ತಿದೆ. ಆದರೆ ಪರಿಸ್ಥಿತಿ ಮಾತ್ರ ಜನತೆಗೆ ಚೊಂಬೆ ಗತಿಯಾಗಿದೆ. ಎಂದು ರಾಮನಗರದ ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ತಾಲೂಕಿನ ಜನರು ತಾವೇ ಸ್ವತಃ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿದರೆ ಎಲ್ಲವೂ ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ತಾಲೂಕಿನ ಜನತೆ ಎಚ್ಚೆತ್ತು ಕೊಳ್ಳದೇ ಇದ್ದರೆ ಮತ್ತೆ ದಶಕ ಕಳೆದರೂ ಇದೆ ಪರಿಸ್ಥಿತಿಯನ್ನು ಅನುಭವಿಸದೆ ಬೇರೆ ದಾರಿ ಇಲ್ಲ ಎಂದು ಹೇಳಲಾಗುತ್ತಿದೆ.
ಕೋಟ್
ಕೆರೆ ಬಾವಿ ಕಟ್ಟೆಗಳೆಲ್ಲಾ ನೀರಿಲ್ಲದೆ ಒಣಗಿ ನಿಂತಿವೆ, ಆದರೂ ಜನಪ್ರತಿನಿಧಿಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
- ಉಮೇಶ್ (ಸ್ಥಳೀಯರು)