Slide
Slide
Slide
previous arrow
next arrow

ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ

300x250 AD

ಕುಮಟಾ: ಬಿಜೆಪಿ ಕೇವಲ ಜಿಲ್ಲೆಯಲ್ಲಲ್ಲ, ಇಡೀ ರಾಜ್ಯದಲ್ಲೇ ಏನೂ ಕೆಲಸ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ಕಾಗೇರಿಯವರ ಬಗ್ಗೆ ವಿಶೇಷವಾಗಿ ಹೇಳಬೇಕಾದದ್ದು ಏನಿಲ್ಲ. ಆರು ಬಾರಿ ಶಾಸಕು, ಮಂತ್ರಿ, ಸಭಾಧ್ಯಕ್ಷರಾಗಿದ್ದರೂ ಒಮ್ಮೆಯೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.

ತಾಲೂಕಿನ ಸಂತೇಗುಳಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅವಶ್ಯಕತೆಯಾದ ಆಸ್ಪತ್ರೆ ಬಗ್ಗೆ ಎಲ್ಲಾ ಶಾಸಕರು ಅಧಿವೇಶನದಲ್ಲಿ ಮಾತನಾಡಿದರೂ ಒಂದೇ ಒಂದು ಮಾತು ಕಾಗೇರಿಯವರ ಬಾಯಿಯಿಂದ ಬಂದಿಲ್ಲ. ಜನರಿಗಾಗಿ ಕೆಲಸ ಮಾಡಲು ಆಗದಿದ್ದರೆ ಇವರಿಗೆ ರಾಜಕಾರಣ ಅವಶ್ಯಕತೆನೇ ಇಲ್ಲ‌. ಗೋವಾ, ಕೇರಳದಲ್ಲಿ ಸಿಆರ್‌ಜೆಡ್ ವಿನಾಯಿತಿ ಇದೆ. ಆದರೆ ನಮ್ಮಲ್ಲಿ ಇಲ್ಲ.‌ ಸಂಸದರು ಈ ಬಗ್ಗೆ ಮಾತನಾಡಿಯೂ ಇಲ್ಲ, ಸಂಸದರ ಪಕ್ಷವೂ ಮಾತನಾಡುವುದಿಲ್ಲ. ಜಿಲ್ಲೆಯ ಕರಾವಳಿಯನ್ನ ಅಭಿವೃದ್ಧಿಪಡಿಸಿದರೆ ಜಿಲ್ಲೆಯ ಜನ ಉದ್ಯೋಗಕ್ಕೆ ಬೇರೆ ಜಿಲ್ಲೆ, ರಾಜ್ಯಕ್ಕೆ ಹೋಗುವ ಅವಶ್ಯಕತೆಯೇ ಇಲ್ಲ. ಆದರೆ ಇವರು ಏನನ್ನೂ ಮಾಡಿಲ್ಲ. ಅವಕಾಶ ಕೊಟ್ಟರೆ ನಾವು ಜನರ ಜೊತೆಯಾಗಿ ನಿಲ್ಲುತ್ತೇವೆ ಎಂದರು.

೩೦ ವರ್ಷ ಸಂಸದರಿದ್ದರೂ ಇಲ್ಲದಂತೆ ಈ ಜಿಲ್ಲೆ ಇತ್ತು. ಯಾವುದೇ ಅಭಿವೃದ್ಧಿ ಮಾಡದ ಅವರು, ಸಂಸತ್‌ನಲ್ಲಿ ಒಂದೇ ಒಂದು ಬಾರಿ ಜಿಲ್ಲೆಯ ಹೆಸರು ಎತ್ತಿಲ್ಲ. ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ಸಂಸತ್‌ನಲ್ಲೇ ಸಿಗಬೇಕಿದೆ. ೨೦೧೮ರಿಂದ ೨೦೨೩ರವರೆಗೆ ಬಿಜೆಪಿ ಆಡಳಿತ ಅತಿಕ್ರಮಣದಾರರ ಕುರಿತು ಒಂದೇ ಒಂದು ಸಭೆ ನಡೆಸಿಲ್ಲ. ಸಿಆರ್‌ಜೆಡ್, ಕೊಂಕಣ ರೈಲ್ವೆ, ಹೆದ್ದಾರಿ ಸಮಸ್ಯೆಗಳ ಬಗ್ಗೆ ಸಂಸದರು ಕೆಲಸ ಮಾಡಬೇಕಾಗುತ್ತದೆ. ಆದರೆ ಎಲ್ಲಿಯೂ ಈ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಗೆಲ್ಲಲೇಬೇಕು. ಇದು ನಮ್ಮವರ, ನಮ್ಮ ಮಕ್ಕಳು- ಮಹಿಳೆಯರ ಅಭಿವೃದ್ಧಿಗಾಗಿ ಚುನಾವಣೆ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ೧೦ ವರ್ಷದಲ್ಲಿ ಬಿಜೆಪಿ ಏನು ಮಾಡಿದೆ, ೧೦ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಅವರು ಸುಳ್ಳು ಹೇಳುತ್ತಲೇ ಹೋದರು, ನಾವು ಕೇಳುತ್ತಲೇ ಹೋದೆವು. ಅವರು ವಾಟ್ಸಪ್‌ನಲ್ಲಿ ಫಾರ್ವರ್ಡ್ ಮಾಡುತ್ತಲೇ ಹೋದರು, ನಾವದನ್ನ ಕಣ್ಮುಚ್ಚಿ ಓದುತ್ತಾ ಮುಂದೆ ನಮ್ಮ ಮನೆಗಳನ್ನೂ ಮರೆತು ಮುಂದೆ ಹೋದೆವು. ಯಾರಿವೂ ಕಣ್ಮುಚ್ಚಿ ಆಶೀರ್ವಾದ ಮಾಡಬೇಡಿ. ಐದು ಗ್ಯಾರಂಟಿ ನೀಡಿ ನಿಮ್ಮ ಮುಂದೆ ಬಂದಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಸಾಕಷ್ಟು ಕೆಲಸಗಳಾಗಿವೆ, ಇನ್ನೂ ಆಗಬೇಕಿದೆ. ನಮ್ಮ ಮನೆ, ನಾವು ವಾಸ ಮಾಡುತ್ತಿರುವ ಜಾಗ ನಮಗೆ ಸಿಗಬೇಕೆಂಬುದಷ್ಟೇ ನಮ್ಮ ಸ್ವಾರ್ಥ. ಅದಕ್ಕಾಗಿ ಅತಿಕ್ರಮಣದಾರರ ಪರವಾಗಿ ನಾನು ಸಂಸತ್‌ನಲ್ಲಿ ಮಾತನಾಡುತ್ತೇನೆಂದು ಭರವಸೆ ನೀಡಲು ನಿಮ್ಮ ಮುಂದೆ ಬಂದಿದ್ದೇನೆ. ಕೇವಲ ಹೇಳುವುದಲ್ಲ, ನಾವು ಮಾಡಿ ತೋರಿಸುತ್ತೇವೆ. ಆರಿಸಿ ಬಂದ ಮೇಲೆ, ಸರ್ಕಾರ ಸ್ಥಾಪನೆಯಾದ ಮೇಲೆ ಮತ್ತೈದು ಗ್ಯಾರಂಟಿಯನ್ನ ದೇಶದ ಜನಿಗೆ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಬಡವರ ಕಲ್ಯಾಣಕ್ಕಾಗಿ ಬಳಸುವ ಹಣವೇ ಗ್ಯಾರಂಟಿ ಹಣ. ಕಪ್ಪು ಹಣದ ಹೆಸರಿನಲ್ಲಿ ಅದಾನಿ- ಅಂಬಾನಿಗೆ ನೀಡಿ, ಅವರ ಮೂಲಕವೇ ನಮ್ಮಿಂದ ವಸೂಲಿ ಮಾಡುವ ಬಿಜೆಪಿಗರಂತೆ ನಾವಲ್ಲ. ಅದಾನಿ- ಅಂಬಾನಿ ಸಾಲ ಮನ್ನಾ ಆಗುತ್ತೆ, ರೈತರದ್ದು ಒಂದು ರೂಪಾಯಿ ಮನ್ನಾ ಆಗಿದೆಯಾ? ಅದಕ್ಕಾಗಿಯೇ ಕಾಂಗ್ರೆಸ್ ಕಿಸಾನ್ ನ್ಯಾಯ ತಂದಿದೆ. ಒಂದು ಮತ ನಿಮ್ಮ ಭವಿಷ್ಯಕ್ಕಾಗಿ. ೩೦ ವರ್ಷ ಬಿಜೆಪಿಗರಿಗೆ ಅವಕಾಶ ನೀಡಿದ್ದಿರಿ, ಒಂದು ಅವಕಾಶ ನನಗೆ ಕೊಟ್ಟು ಬದಲಾವಣೆ ನೋಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಕೆಲಸಕ್ಕಿಂತಲೂ ಆರು ಬಾರಿ ಆಯ್ಕೆಯಾದ ಸಂಸದರು ಮಾತನಾಡಿದ್ದೇ ಹೆಚ್ಚು. ಮಹಿಳೆಯರಿಂದಲೇ ಎಲ್ಲವೂ ಸಾಧ್ಯವೆಂದು ಮಹಿಳಾ ಅಭ್ಯರ್ಥಿಯನ್ನ ಕಾಂಗ್ರೆಸ್ ನಮಗೆ ಕೊಡುಗೆ ನೀಡಿದ್ದಾರೆ. ಕುಮಟಾದಲ್ಲಿ ಶಾಸಕರಿಲ್ಲ, ಡಾ.ಅಂಜಲಿ ಅವರನ್ನ ಗೆಲ್ಲಿಸಿದರೆ ಅವರು ಆ ಕೊರತೆ ನೀಗಿಸಿ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಡಲಿದ್ದಾರೆ. ಸ್ಪರ್ಧಿಸಿರುವ ಅಭ್ಯರ್ಥಿಯನ್ನ ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸಂತೇಗುಳಿಯಲ್ಲಿ ಹಿಂದೆ ಬಹಳ ಕಷ್ಟದ ಪರಿಸ್ಥಿತಿ ಇತ್ತು. ಇಲ್ಲಿಗೆ ಮೂಲಸೌಕರ್ಯ ಒದಗಿಸಿಕೊಟ್ಟಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಎಲ್ಲಾ ಧರ್ಮೀಯರು ಇದ್ದರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿರುವವರು ಇಲ್ಲಿಯವರು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಮತದಾನದ ಹಕ್ಕು ಸಾಯುವವರೆಗೂ ಇರುತ್ತದೆ. ಸರ್ಕಾರಿ ರಜೆ ಇದೆಯೆಂದು ಮತದಾನದಿಂದ ವಂಚಿತರಾಗದಿರಿ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರರು ನೀಡಿದ ಪವಿತ್ರ ಗ್ರಂಥ ಸಂವಿಧಾನದ ಮೇಲೆಯೇ ಈ ರಾಷ್ಟ್ರ ನಡೆಯುತ್ತಿದೆ ಎಂದರು.

300x250 AD

ಗೌರವಾನ್ವಿತ ಪ್ರಧಾನನಂತ್ರಿಗಳು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದರು. ಆದರೆ ನಿರುದ್ಯೋಗ ಹೆಚ್ಚುತ್ತಲೇ‌ ಇದೆ. ವಿದೇಶದಿಂದ ಕಪ್ಪು ಹಣ ತಂದು ಖಾತೆಗೆ ೧೫ ಲಕ್ಷ ಜಮೆ ಮಾಡುತ್ತೇವೆಂದರು. ಆದರೆ ಬ್ಯಾಂಕ್ ಖಾತೆ ತೆರೆಯಲು ಕಟ್ಟಿದ ಹಣವೂ ಹೋಯಿತು, ಇದು ಮೋದಿಯವರ ಕಾಣಿಕೆ ಎಂದ ಅವರು, ವ್ಯಕ್ತಿಗತವಾಗಿ ನಾನು ಯಾರನ್ನೂ ಟೀಕಿಸುವುದಿಲ್ಲ, ಯಾರ ಮೇಲೂ ದ್ವೇಷ ಮಾಡಲ್ಲ. ಆದರೆ ಚುನಾವಣೆ ಬಂದಾಗ ನಾವು ಮಾಡಿದ್ದನ್ನ ಹೇಳಿಕೊಳ್ಳಬೇಕು. ಅದರ ಮೇಲೆಯೇ ಮತ ಪಡೆಯಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ೩೦ ವರ್ಷಗಳಿಂದ ಜಿಲ್ಲೆಯಲ್ಲಿ ಆಗಬೇಕಿದ್ದ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಯನ್ನ ನಾವು ಈಡೇರಿಸಿದ್ದೇವೆ. ನಮ್ಮ ಗ್ಯಾರಂಟಿಯನ್ನ ನಕಲಿಸಿ ಈಗ ಬಿಜೆಪಿಗರು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ೧೫ ಲಕ್ಷದ ಗ್ಯಾರಂಟಿ ಇನ್ನೂ ಈಡೇರಿಸಿಲ್ಲ. ಗ್ಯಾರಂಟಿಯ ಅರ್ಥವೂ ಅವರಿಗೆ ಗೊತ್ತಿಲ್ಲ. ಡಾ.ಅಂಜಲಿ ನಿಂಬಾಳ್ಕರ್ ಅವರು ಸಂಸದರಾಗಿ ಸಂಸತ್‌ಗೆ ಹೋಗೇ ಹೋಗುತ್ತಾರೆ, ಮಂತ್ರಿಯಾಗಿಯೂ ಪುನಃ ಬರುತ್ತಾರೆ. ಎಲ್ಲರೂ ಒಂದಾಗಿ ಅವರ ಗೆಲುವಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಕ್ಷೇತ್ರ‌ ಭೌಗೋಳಿಕವಾಗಿ ಬಹಳ‌ ದೊಡ್ಡದು. ವೈದ್ಯರಾಗಿ ರೋಗಿಗಳ ನಾಡಿಮಿಡಿತ ಅರಿತಂತೆಯೇ ಅವರು ಕ್ಷೇತ್ರದ ಜನತೆಯ ಸುಖ- ದುಃಖಗಳನ್ನೂ ತಿಳಿದಿದ್ದಾರೆ. ಜಿಲ್ಲೆಯಿಂದ ಡೆಲ್ಲಿಯವರೆಗೆ ಧ್ವನಿ ಎತ್ತಲು ಡಾ.ಅಂಜಲಿ ಸಶಕ್ತರು. ಐದು ವರ್ಷಗಳಲ್ಲಿ ಸಂಸದರಾಗಿ ಮಾರ್ಗರೇಟ್ ಆಳ್ವಾ ಅವರು ಮಾಡಿದ ಕೆಲಸಗಳನ್ನ ೩೦ ವರ್ಷಗಳವರೆಗೆ ಬಿಜೆಪಿ ಶಾಸಕರಿಗೆ ಮಾಡಲು ಆಗಿಲ್ಲ. ಕಚೇರಿಗಳನ್ನ ಶಿರಸಿಗೆ ಕೊಂಡೊಯ್ದಿದ್ದು ಬಿಟ್ಟರೆ ಕಾಗೇರಿಯವರು ಬೇರೇನೂ ಮಾಡಿಲ್ಲ. ಹೀಗಾಗಿ ಡಾ.ಅಂಜಲಿ ಅವರನ್ನ ಆರಿಸಿ ತರಬೇಕು ಎಂದರು.

ಸಂತೇಗುಳಿ ಘಟಕದಿಂದ ಮಾಲಾರ್ಪಣೆ ಮಾಡಿ, ಪೇಟ ತೊಡಿಸುವ ಮೂಲಕ ಡಾ.ಅಂಜಲಿ, ಆರ್.ವಿ.ದೇಶಪಾಂಡೆ, ಮಂಕಾಳ ವೈದ್ಯ ಅವರಿಗೆ ಸ್ವಾಗತಿಸಿಕೊಳ್ಳಲಾಯಿತು. ಸೊಪ್ಪಿನಹೊಸಳ್ಳಿ, ಸಂತೇಗುಳಿ ಪಂಚಾಯತಿ ವತಿಯಿಂದ ಡಾ.ಅಂಜಲಿ ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ, ಕೆಪಿಸಿಸಿಯ ಇಕ್ಬಾಲ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸತೀಶ್ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಇದ್ದರು.


ಪಕ್ಷ ಸೇರ್ಪಡೆ…
ಜೆಡಿಎಸ್‌ನಲ್ಲಿದ್ದ ಕಲ್ಲಬ್ಬೆಯ ಸುಬ್ರಹ್ಮಣ್ಯ ಹೆಗಡೆ ಸಂಗಡಿಗರು, ಮೂರೂರು ಗ್ರಾ.ಪಂ. ಪ್ರತಿನಿಧಿಗಳು ಪಕ್ಷ ಸೇರ್ಪಡೆಗೊಂಡರು.

Share This
300x250 AD
300x250 AD
300x250 AD
Back to top