ಶಿರಸಿ: ಸ್ಕೊಡ್ ವೆಸ್ ಸಂಸ್ಥೆಯು ಕರ್ನಾಟಕ, ಗೋವಾ, ಆಂದ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸಂಸ್ಥೆಯ 18 ನೆಯ ವಾರ್ಷಿಕೋತ್ಸವವನ್ನು “ಶಕ್ತಿ ದಿವಸ್” ಎಂಬ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ತಿಳಿಸಿದರು.
ಶನಿವಾರ ಅವರು ಶಿರಸಿಯಲ್ಲಿನ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿ, ಶಕ್ತಿದಿವಸ ಸಮಾರಂಭದ ಪ್ರಯುಕ್ತ ಸ್ಕೊಡ್ ವೆಸ್ ಕರ್ನಾಟಕ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಡಾ.ಶರಣ ಬಿರಾದಾರ್ ಮೆಮೋರಿಯಲ್ ಅವಾರ್ಡ್ ಪ್ರದಾನ ಹಾಗೂ ಸಂಸ್ಥೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎ.೨೧ ರಂದು ಬೆಳಿಗ್ಗೆ 10 ಘಂಟೆಯಿಂದ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಜರುಗಲಿದೆ.
ಆರೋಗ್ಯ, ಕೃಷಿ ಮತ್ತು ಸಮಾಜ ಸೇವೆಯಲ್ಲಿ ವಿಶೇಷ ಸಾಧನೆ ಮಾಡಿದ ಮೂವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ 10 ರೂಪಾಯಿ ಡಾಕ್ಟರ್ ಎಂದು ಪ್ರಸಿದ್ಧರಾದ ಲಕ್ಷಾಂತರ ಜನರಿಗೆ ಆರೋಗ್ಯ ಸೇವೆ ನೀಡಿರುವ ಕಲಬುರ್ಗಿಯ ಡಾ.ಮಲ್ಹಾರ್ ರಾವ್ ಮಲ್ಲೆ, ಸಾವಯವ ಹಾಗೂ ಸಮಗ್ರ ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳಿಂದ ಸಾವಿರಾರು ರೈತರಿಗೆ ಅರಿವು ಮೂಡಿಸುತ್ತಿರುವ ಗದಗಿನ ಮಾದರಿ ರೈತ ದೇವಪ್ಪ ಗುಂಡಿಕೇರಿ ಹಾಗೂ ಸೇವಾ ಮನೋಭಾವನೆಯಿಂದ ರುದ್ರಭೂಮಿಯನ್ನೇ ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಕೇಂದ್ರವನ್ನಾಗಿಸಿ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಶಿರಸಿ ವಿದ್ಯಾನಗರ ರುದ್ರ ಭೂಮಿ ಸಮಿತಿಯ ಪರವಾಗಿ ಕಾಶಿನಾಥ ಮೂಡಿ ಇವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುತ್ತದೆ ಎಂದ ಅವರು, ೨೦೨೩-೨೪ ನೆಯ ಸಾಲಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಡಾ.ಶರಣ್ ಬಿರಾದಾರ್ ಮೆಮೋರಿಯಲ್ ಸೇವಾ ಪುರಸ್ಕಾರ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಖಾಸಗಿ ಪ್ರಸಾರದ ವಿಕಾಸ ಪಥ ಪತ್ರಿಕೆಯ 2 ನೆಯ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಸಂಸ್ಥೆಯ ಎಲ್ಲ ವಿಭಾಗದ ಸಾಧನೆಗಳನ್ನು ಪ್ರದರ್ಶಿಸುವ ವಸ್ತು ಪ್ರದರ್ಶನ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಕೈಗಾದ ಎನ್.ಪಿಸಿಐಎಲ್ ಸೈಟ್ ಡೈರೆಕ್ಟರ್ ಪ್ರಮೋದ ರಾಯಚೂರು ಉದ್ಘಾಟಿಸಲಿದ್ದು, ಸ್ಕೊಡ್ ವೆಸ್ ಅಧ್ಯಕ್ಷ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಸಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಗುಜರಾತನ ದೇಸಾಯಿ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕಿ ಮಿತ್ತಲ್ ಗೋಹಿಲ್ ಉದ್ಘಾಟಿಸಲಿದ್ದು, ವಿಕಾಸ ಪಥ ಮಾಸ ಪತ್ರಿಕೆಯ 2 ನೆಯ ಆವೃತ್ತಿಯನ್ನು ಬೆಂಗಳೂರಿನ ಬ್ರಿಟಾನಿಯಾ ನ್ಯೂಟ್ರಿಷನ್ ಫೌಂಡೇಶನ್ ಮುಖ್ಯಸ್ಥೆ ಪ್ರಿಯಾಂಕಾ ಸಿಂಗ್ ಬಿಡುಗಡೆಗೊಳಿಸಲಿದ್ದಾರೆ. ಸ್ಕೊಡ್ ವೆಸ್ ಕರ್ನಾಟಕ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಕೈಗಾ ಎನ್.ಪಿ.ಸಿ.ಐ.ಎಲ್ ಸಿ.ಎಸ್.ಆರ್ ಚೇರ್ ಮೆನ್ ಆರ್.ವಿ.ಮನೋಹರ ಪ್ರದಾನ ಮಾಡಲಿದ್ದು, ಡಾ.ಶರಣ ಬಿರಾದಾರ್ ಮೆಮೋರಿಯಲ್ ಅವಾರ್ಡ್ ನ್ನು ಬಳ್ಳಾರಿಯ ಸುಕೋ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಟಿ.ಎನ್.ಈಶ್ವರನ್ ಪ್ರದಾನ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕುಮಾರ ಕೂರ್ಸೆ, ಸ್ಕೊಡ್ ವೆಸ್ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್.ರವಿ, ಕಾರ್ಯಕಾರಿ ಸದಸ್ಯರಾದ ಪ್ರೋ.ಕೆ.ಎನ್.ಹೊಸಮನಿ, ದಯಾನಂದ ಅಗಾಸೆ ಇದ್ದರು.