ಶಿರಸಿ:ತಾಲೂಕಿನ ಶ್ರೀಕ್ಷೇತ್ರ ಗೋಳಿ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಏ. 9, ಯುಗಾದಿ ಹಬ್ಬದಂದು ಇಳಿಹೊತ್ತು 6.30 ರಿಂದ ‘‘ ಸ್ವರಾಂಜಲಿ’’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಸಂಘಟಿಸಲಾಗಿದೆ.
ನಿವೃತ್ತ ಪ್ರೊಫೆಸರ್ ಹಾಗೂ ಖ್ಯಾತ ಸಿತಾರ್ ವಾದಕರಾದ ಆರ್. ವಿ. ಹೆಗಡೆ ಹಳ್ಳದಕೈ ತಮ್ಮ ತಂದೆಯವರಾದ ದಿ. ವಿಶ್ವನಾಥ ಹೆಗಡೆ ಹಳ್ಳದಕೈ ಮತ್ತು ಗುರುಗಳಾದ ಡಾ. ಬಿಂದುಮಾಧವ ಪಾಠಕ ಇವರ ಸ್ಮರಣಾರ್ಥ ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸ್ವರಾಂಜಲಿ ಕಾರ್ಯಕ್ರಮ ಇದಾಗಿದ್ದು ಅಂದು ನಡೆಯುವ ಗಾಯನ ವಾದನಗಳ ಸಮ್ಮಿಲನದ ಆಂಭಿಕ ಕಾರ್ಯಕ್ರಮವಾಗಿ ಪಂ. ಆರ್. ವಿ. ಹೆಗಡೆಯವರು ಬಹಳ ಅಪರೂಪದ ವಾದನ ಸುರಬಹಾರ್‌ನ್ನು ನುಡಿಸಲಿದ್ದಾರೆ. ತದನಂತರದಲ್ಲಿ ವಿ. ನಾಗಭೂಷಣ ಹೆಗಡೆ ಗಾಯನ ಪ್ರಸ್ತುತಗೊಳ್ಳಲಿದೆ. ವಿಶೇಷ ಆಮಂತ್ರಿತ ಕಲಾವಿದರಾದ ಖ್ಯಾತ ಸಿತಾರ್ ವಾದಕ ಉಸ್ತಾದ್ ಛೋಟೆ ರೆಹಮತ್ ಖಾನ್‌ರವರಿಂದ ಸಿತಾರ್ ವಾದನ ನಡೆಯಲಿದ್ದು ನಂತರದಲ್ಲಿ ಖ್ಯಾತ ಗಾಯಕ ಪಂ. ಡಾ ಶಶಾಂಕ ಮುಕ್ತೇದಾರ್ ಗೋವಾರವರ ಸಂಗೀತ ಕಛೇರಿ ನಡೆಯಲಿದೆ.
ಈ ಎಲ್ಲಾ ಸಂಗೀತ ಕಾರ್ಯಕ್ರಮಕ್ಕೆ ತಬಲಾದಲ್ಲಿ ಡಾ. ಉದಯ ಕುಲಕರ್ಣಿ ಹಾಗೂ ಗುರುರಾಜ ಹೆಗಡೆ ಅಡಕುಳ ಮತ್ತು ಸಂವಾದಿನಿಯಲ್ಲಿ ಭರತ ಹೆಗಡೆ ಹೆಬ್ಬಲಸುರವರು ಸಾಥ್ ನೀಡಲಿದ್ದಾರೆ. ಉಚಿತ ಪ್ರವೇಶವಿದ್ದು ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪಂ. ರಾಮಚಂದ್ರ ವಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.