ಹೊನ್ನಾವರ : ಚುನಾವಣಾ ಕಾರ್ಯಗಳಲ್ಲಿ ಗಣನೀಯವಾಗಿ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಎಲ್ಲ ಸರ್ಕಾರಿ, ಅರೆಸರ್ಕಾರಿ ನೌಕರರ ಕಡ್ಡಾಯ ಕರ್ತವ್ಯವಾಗಿರುವುದರಿಂದ ಯಾರೂ ಈ ಕೆಲಸವನ್ನು ನಿರಾಕರಿಸುವಂತಿಲ್ಲ. ಮಹಿಳೆಯರಂತೂ ಈ ಕೆಲಸವನ್ನು ನಿರ್ವಹಿಸುತ್ತಲೇ ಬರುತ್ತಿದ್ದಾರೆ. ಆದರೆ ಚಿಕ್ಕ ಮಕ್ಕಳಿರುವ ತಾಯಂದಿರರಿಗೆ ರಿಯಾಯಿತಿ ಕೊಡದೆ ಇರುವುದು, ಆ ಸಮಯದಲ್ಲಿ ಅಂತಹ ಕುಟುಂಬಕ್ಕೆ ಮಗುವಿನ ಪಾಲನೆ ಮಾಡುವುದು ಕಷ್ಟದ ಕೆಲಸ ಆಗುತ್ತಿದೆ.
ಪ್ರತಿ ಬಾರಿಯೂ ಚುನಾವಣೆ ಬಂದಾಗ ವಿವಿಧ ಕಡೆಯಿಂದ ಮಹಿಳಾ ಸಿಬ್ಬಂದಿಗಳು ಚುನಾವಣೆ ಸಮಯದಲ್ಲಿ ಪಡುವ ಕಷ್ಟದ ಕೇಳುತ್ತಲೇ ಇರುತ್ತೇವೆ. ಒಂದು ಕೈಯಲ್ಲಿ ಮತಯಂತ್ರದ ಪೆಟ್ಟಿಗೆ, ಮತ್ತೊಂದು ಕೈಯಲ್ಲಿ ನಾನಾ ಆಟಿಕೆ ಹೊತ್ತಿರುವ ಮಹಿಳೆ. ಪತಿಯ ತೋಳಿನಲ್ಲಿದ್ದ ಮಗುವಿಗೆ ಬಾಳೆಹಣ್ಣು ತಿನ್ನಿಸುತ್ತಲೇ ಚುನಾವಣೆ ಕಾರ್ಯ ನಿರ್ವಹಣೆ, ಪೋಲಿಯೋ ಪೀಡಿತ ಮಗಳೊಂದಿಗೆ ಮತಗಟ್ಟೆಯತ್ತ ಹೊರಟ ತಾಯಿ, ಮಗುವನ್ನು ಸಂತೈಸುತ್ತಲೇ ಪತ್ನಿಯನ್ನು ಕಳುಹಿಸಿದ ಪತಿ ಹೀಗೆ ಹಲವು ಘಟನೆ ನಡೆಯುತ್ತಿದ್ದರು, ಚುನಾವಣೆಯಲ್ಲಿ ಇಂತವರಿಗೆ ರಿಯಾಯಿತಿ ಕೊಡುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ತಾಯಂದಿರರಿಗೆ ಚುನಾವಣೆ ಕರ್ತವ್ಯದಿಂದ ದೂರ ಇಡಬೇಕಿದೆ.
ಕೆಲವು ಸರಕಾರಿ ನೌಕರರಲ್ಲಿ ಪತಿ, ಪತ್ನಿ ಇಬ್ಬರನ್ನು ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡುತ್ತಾರೆ. ಕೆಲವರಿಗೆ ಕೌಟುಂಬಿಕ ಸಮಸ್ಯೆ ಇರುತ್ತದೆ. ಇವರನ್ನೇ ನಂಬಿದ ತಂದೆ, ತಾಯಿ, ಅಂಗವಿಕಲ ಮಕ್ಕಳು, ಅನಾರೋಗ್ಯ ಹೊಂದಿದವರು ಇರುವಂತವರಿಗೆ ಇಬ್ಬರಲ್ಲಿ ಒಬ್ಬರಿಗಾದರೂ ರಿಯಾಯಿತಿ ಕೊಡಬೇಕು ಎನ್ನುವ ಮನವಿ ಕೆಲವರಿಂದ ಕೇಳಿ ಬರುತ್ತಿದೆ. ಅದರ ಜೊತೆಗೆ ಕೆಲವು ಪ್ರಭಾವ ಇರುವ ನೌಕರರು, ತಮ್ಮ ಪ್ರಭಾವ ಬೆಳೆಸಿ, ಈ ಕೆಲಸದಿಂದ ನುಣುಚಿಕೊಳ್ಳುತ್ತಾರೆ. ಚುನಾವಣೆ ಕರ್ತವ್ಯಕ್ಕೆ ಹೋಗಲು ಸಾಕಷ್ಟು ಜನರು ಇದ್ದರು ಕೂಡ ಚಿಕ್ಕ ಮಕ್ಕಳು ಇರುವ ತಂದೆ ತಾಯಿಯನ್ನೇ ನೇಮಕ ಮಾಡುತ್ತಿರುವುದು ಕೆಲವು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಿ ಮಾಡಿ ವಿನಾಯ್ತಿ ಕೊಡಿ:ಹೆರಿಗೆ ರಜೆ ಪಡೆದವರನ್ನು ಪ್ರತ್ಯೇಕ ಪಟ್ಟಿ ಮಾಡಿ ವಿನಾಯಿತಿ ನೀಡಬೇಕು. ಅದನ್ನು ಬಿಟ್ಟು ಐದಾರು ತಿಂಗಳಿಂದ, ಎರಡು ವರ್ಷದ ಮಗುವಿರುವವರನ್ನೂ ಚುನಾವಣೆ ಕೆಲಸಕ್ಕೆ ನಿಯೋಜಿಸಿರುವುದು ಸರಿಯಲ್ಲ.
ಶಾಲೆಗಳಲ್ಲಿ ಧೂಳೂ ಹೊಡೆಯುವವರೂ ಇಲ್ಲ:
ಹಲವೆಡೆ ಶಾಲೆಗಳಲ್ಲಿ ಮತಗಟ್ಟೆಗಳನ್ನು ರಚಿಸಿದೆ. ಆದರೆ, ಶಾಲೆಗಳಿಗೆ ಬೇಸಿಗೆ ರಜೆ ನೀಡಿರುವ ಸಮಯದಲ್ಲಿ ಅಲ್ಲಿ ನಿತ್ಯ ಕಸ ಗುಡಿಸಿ ಶುಚಿ ಮಾಡುವರೂ ಇಲ್ಲ. ಮತಯಂತ್ರಗಳನ್ನು ತೆಗೆದುಕೊಂಡು ಹೋದ ಸಿಬ್ಬಂದಿಯೇ ಮತಗಟ್ಟೆಗಳಲ್ಲಿ ಕಸ ಹೊಡೆದು, ತೊಳೆದು ಶುಚಿ ಮಾಡಿದಂತಹ ಪ್ರಸಂಗಗಳು ಈ ಹಿಂದೆ ನಡೆದಿದೆ.
ನಮ್ಮ ಹಳ್ಳಿಗಳು ಇನ್ನೂ ಕೆಲವು ಕಡೆ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು ಮಹಿಳಾ ವಾಸಕ್ಕೆ ಯೋಗ್ಯವಾಗಿಲ್ಲದಿರುವುದೇ ತಲೆನೋವಿನ ಸಂಗತಿಯಾಗಿದೆ. ಗ್ರಾಮಾಂತರದ ಮತಗಟ್ಟೆಗಳಲ್ಲಿ ರಾತ್ರಿ ತಂಗಲು ಮಹಿಳೆಯರಿಗೆ ಸುರಕ್ಷಿತತೆ ಎಂಬುದೇ ಇಲ್ಲ. ಸಾಮಾನ್ಯವಾಗಿ ಶಾಲಾ–ಕಾಲೇಜು ಅಥವಾ ಸಮುದಾಯ ಭವನಗಳನ್ನು ಮತಗಟ್ಟೆಗಳಾಗಿ ಗುರುತಿಸಲಾಗಿರುತ್ತದೆ.
ಆ ಕಟ್ಟಡಗಳಲ್ಲಿ ನಗರ, ಜಿಲ್ಲಾ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆ ವಿದ್ಯುತ್ ದೀಪ, ಕೋಣೆಗಳಿಗೆ ಬಾಗಿಲು, ಚಿಲಕ, ಕುಡಿಯುವ ನೀರು ಮುಂತಾಗಿ ಯಾವ ಸೌಲಭ್ಯಗಳೂ ಇರುವುದಿಲ್ಲ. ಚುನಾವಣೆ ತುಂಬಾ ಸೂಕ್ಷ್ಮವಾದ ಸಂದರ್ಭ ಬೇರೆ. ಯಾರ ಮನೆಗೂ ಹೋಗುವಂತಿಲ್ಲ. ಆಡಳಿತದಲ್ಲಿ ಮನೆ ಮಾಡಿಕೊಂಡಿರುವ ಭ್ರಷ್ಟತೆ ಕಾರಣವಾಗಿ ಜನತೆಯಲ್ಲಿ ಸರ್ಕಾರ ಅಥವಾ ಸರ್ಕಾರಿ ಯಂತ್ರದ ಬಗ್ಗೆ ಪೂರ್ವಗ್ರಹಪೀಡಿತ ದೃಷ್ಟಿಗಳು ತುಂಬಿಕೊಂಡಿವೆ. ಹೀಗಾಗಿ ಚುನಾವಣಾ ಸಿಬ್ಬಂದಿ ಬಗೆಗೂ ತಿರಸ್ಕಾರ, ಗುಮಾನಿ, ನಿರ್ಲಕ್ಷ್ಯ ವಿಜೃಂಭಿಸುತ್ತವೆ.
ಇಂಥ ಪರಿಸ್ಥಿತಿಯಲ್ಲಿ ಮಹಿಳೆಯರು ಮೂಲ ಸೌಲಭ್ಯಗಳಿಗಾಗಿ ಹಳ್ಳಿಗಳಲ್ಲಿ ಯಾರನ್ನೂ ಕೇಳುವಂತಿಲ್ಲ. ಚುನಾವಣಾ ಮುನ್ನಾ ದಿನವೇ ಬೆಳಗಿನ ಜಾವ ೭ ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಸರದಿಗಾಗಿ ಕಾದು ಕೂಡಬೇಕು ಅಲ್ಲಿಯೂ ಶೌಚಾಲಯವಿರುವುದಿಲ್ಲ. ಅಲ್ಲಿಂದಲೆ ನಿಯೋಜಿಸಲಾದ ಹಳ್ಳಿ, ತಾಂಡಾ, ಕಗ್ಗಾಡು ಎಲ್ಲೆಲ್ಲಿಯೋ ರಸ್ತೆ ಇಲ್ಲದ ಕಡೆಯೂ ತೆರಳಬೇಕು. ಮತಗಟ್ಟೆಗೆ ತಲುಪಲು ಸಾಯಂಕಾಲ ಆಗಬಹುದು. ರಾತ್ರಿ ಕತ್ತಲಲ್ಲೂ ಚುನಾವಣಾ ಪ್ರಕ್ರಿಯೆಗಾಗಿ ಮತಗಟ್ಟೆ ಸಿದ್ಧಪಡಿಸಿಕೊಳ್ಳಬೇಕು. ಬೆಳಗಿನ ಜಾವ ೬ ಗಂಟೆಯಿಂದಲೇ ಕೆಲಸಕ್ಕೆ ಶುರುಹಚ್ಚಿಕೊಳ್ಳಬೇಕು.
ನಿಗದಿತ ಅವಧಿಯವರೆಗೆ ಎಲ್ಲ ಕೆಲಸ ಮುಗಿಸಿ ಮತಪೆಟ್ಟಿಗೆಯನ್ನು ಸಂಬಂಧಪಟ್ಟ ಅಧಿಕಾರಿಗೆ ತಲುಪಿಸಿ ಎರಡನೇ ದಿನ ಮಧ್ಯರಾತ್ರಿಯೋ ಅಥವಾ ಮೂರನೆ ದಿನ ಬೆಳಗಿನ ಜಾವವೋ ಬಂದು ತಲುಪಬೇಕು. ಹೆಚ್ಚು ಕಡಿಮೆ ಎರಡು ದಿನದ ಮಟ್ಟಿಗೆ ಮಹಿಳೆಯರು ಮನೆಯಿಂದ ದೂರವಿರಬೇಕು. ಇಷ್ಟು ದೀರ್ಘ ಅವಧಿಯಲ್ಲಿ ಮಲ–ಮೂತ್ರದ ಬಾಧೆ ತೀರಿಸಿಕೊಳ್ಳುವುದು ಹೇಗೆ? ಈ ಅವಧಿಯಲ್ಲಿ ಸ್ತ್ರೀಯರಿಗೆ ಮಾಸಿಕ ಸ್ರಾವ ಕಾಣಿಸಿಕೊಂಡರಂತೂ ನರಕವೇ ಸರಿ. ಕೆಲವೊಮ್ಮೆ ನಾಲ್ಕು ಪುರುಷರ ನಡುವೆ ಒಬ್ಬಳೇ ಮಹಿಳೆಗೆ ನಿಯೋಜಿಸಲಾಗಿರುತ್ತದೆ. ಅಪರಿಚಿತ ಪುರುಷರ ನಡುವೆ ಇದಂತೂ ಹೇಳಿಕೊಳ್ಳಲಾಗದ ಸಂಕಟವಾಗುತ್ತದೆ.
ಸಾಧ್ಯವಾದಷ್ಟು ಈ ಕೆಲಸಗಳಿಗೆ ಪುರುಷರನ್ನು ನಿಯೋಜಿಸುವುದು ಒಳಿತು. ಯಾವ ಕೆಲಸವನ್ನಾದರೂ ಮಾಡುವಲ್ಲಿ ಮಹಿಳೆಯರು ಹಿಂದೆ ಸರಿಯುತ್ತಿಲ್ಲ. ಆದರೆ ಪುರುಷರ ಹೆಗಲೆಣೆಯಾಗಿ ದುಡಿಯುತ್ತಿರುವ ಮಹಿಳೆಯರನ್ನು ಗೌರವದಿಂದ ನೋಡಬೇಕಾದ ಹೊಣೆಗಾರಿಕೆ ಸಮಾಜ ಮತ್ತು ಸರ್ಕಾರಕ್ಕೆ ಇರಬೇಡವೆ? ಚುನಾವಣಾ ಕೆಲಸ ಎಲ್ಲ ನೌಕರರ ಕರ್ತವ್ಯ ಎಂದಾದರೆ ಮೂಲಸೌಲಭ್ಯಗಳನ್ನು ಪಡೆಯುವುದು ಹಕ್ಕಾಗಿದೆ ಎಂಬುದನ್ನು ಮರೆಯದಿರೋಣ.
ಇಷ್ಟಕ್ಕೂ ಕೇಂದ್ರ ಚುನಾವಣಾ ಆಯೋಗ, ಮೂಲ ಸೌಲಭ್ಯಗಳಿಲ್ಲದಿದ್ದಲ್ಲಿ ಮಹಿಳೆಯರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸ-ಬಾರದೆಂದು 1996ರಲ್ಲೇ ನಿರ್ದೇಶನ ನೀಡಿದೆ. ಪ್ರತಿ ಚುನಾವಣೆ ಸಂದರ್ಭಗಳಲ್ಲಿ ಮಹಿಳೆಯರು ಈ ಸೌಲಭ್ಯಗಳನ್ನು ಕುರಿತು ಧ್ವನಿ ಎತ್ತಿರುವರಾದರೂ ಸರ್ಕಾರ ಕಿವಿಗೊಟ್ಟಿಲ್ಲ.