ಶಿರಸಿ: ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಬೇಕಾದರೂ ಆಗಲಿ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಚುನಾವಣೆ ಎನ್ನುವ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದೇ ಮುಂದಿರುವ ಗುರಿ ಎಂದು ಉತ್ತರಕನ್ನಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ 5 ಕಾಂಗ್ರೆಸ್ ಶಾಸಕರಿದ್ದೇವೆ. ಉಸ್ತುವಾರಿ ಸಚಿವ ಮಂಕಾಳ ವೈದ್ಯ, ದೇಶಪಾಂಡೆ, ಭೀಮಣ್ಣ ನಾಯ್ಕ, ಸತೀಶ ಸೈಲ್, ಅವರು ಸೇರಿ ಪಕ್ಷವನ್ನು ಸಂಘಟಿಸಿದ್ದೇವೆ. ಕ್ಷೇತ್ರದ ಎಲ್ಲ ಹಿರಿಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ಕಳೆದ 30 ವರ್ಷದಿಂದ ಈ ಕ್ಷೇತ್ರದಲ್ಲಿದ್ದ ಸಂಸದರು ಯಾವುದೇ ಕೆಲಸ ಮಾಡಿಲ್ಲ. ಸ್ಥಳೀಯ ಶಾಸಕರೇ ಕೆಲಸ ಮಾಡಿದ್ದಾರೆ. ಹಿಂದುತ್ವ ಎನ್ನುವ ಮೂಲಕ ಜನರಿಗೆ ತಪ್ಪು ದಾರಿ ತೋರಿಸಿ 5 ವರ್ಷ ಮಲಗಿದ್ದಾರೆ. ಚುನಾವಣೆ ಬಂದ ತಕ್ಷಣ ಎದ್ದು ಬಂದು ಪ್ರಚಾರ ನಡೆಸುತ್ತಾ ಬಂದಿದ್ದರು.
ನಾನು ಖಾನಾಪುರ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇವೆ. ಆಗಲೂ ಸಂಸದರು ಒಮ್ಮೆಯೂ ಕಾಣಿಸಿಲ್ಲ. ಹೀಗಾಗಿ ಜನರಿಗೆ ಬಿಜೆಪಿಯ ಮೇಲೆ ಆ ಕೋಪ ಇದೆ. ಹೀಗಾಗಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಜಿಲ್ಲೆಯಲ್ಲಿರುವ ಎಲ್ಲ ವಿಧಾನ ಸಭಾ ಕ್ಷೇತ್ರಗಳೂ ಮುಖ್ಯ. ಎಲ್ಲ ಕ್ಷೇತ್ರಗಳೂ ನಿರ್ಣಾಯಕವಾಗಲಿದೆ. ಹೀಗಾಗಿ ಉತ್ತರ ಕನ್ನಡದಲ್ಲೇ ಉಳಿದು ಜನರ ಸೇವೆಗೆ ಸಿದ್ದವಾಗಿದ್ದೇನೆ ಎಂದರು.
ಆರ್.ವಿ.ದೇಶಪಾಂಡೆ ಮಾತನಾಡಿ, ವಿಶ್ವೇಶ್ವರ ಹೆಗಡೆ ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಆದರೆ ಅವರದ್ದೇ ಪಕ್ಷದಲ್ಲಿ ಟಿಕೆಟ್ ಸಿಗದ ಅನಂತಕುಮಾರ ಸಾಹೇಬ್ರು ಏನ್ ಮಾಡ್ತಾರೆ ನೋಡಬೇಕಲ್ಲ. ಅದೆಲ್ಲ ನೋಡಿ ಮುಂದಿನ ರಣತಂತ್ರ ಹಣೆಯಲಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಘೋಷಣೆಗೆ ಸಂಬಂಧಿಸಿ ಯಾವುದೇ ಅಸಮಾಧಾನವಿಲ್ಲ. ಒಬ್ಬರಿಗೆ ಟಿಕೆಟ್ ಸಿಗುತ್ತದೆ. ಕೆಲವರಿಗೆ ಸಿಗಲ್ಲ. ರವೀಂದ್ರ ನಾಯ್ಕ ಅವರು ಅರಣ್ಯ ಹೋರಾಟ ಮಾಡಿ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ. ಅವರು ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಯಾವ ಅಸಮಾಧಾನವೂ ಇಲ್ಲ ಎಂದ ದೇಶಪಾಂಡೆ, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ನಡೆದಿದೆ. ಇಂದಿನಿಂದ ಚುನಾವಣೆ ಪ್ರಚಾರ ಕಾರ್ಯ ಆರಂಭವಾಗಲಿದೆ. ಹಳಿಯಾಳ ದಾಂಡೇಲಿ ಜೊಯಿಡಾಕ್ಕೆ 31 ಕ್ಕೆ ಬಂದು ಪ್ರಚಾರ ನಡೆಯಲಿದೆ ಎಂದರು.
ನಾಮಪತ್ರ ಸಲ್ಲಿಕೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಸ್ಪರ್ಧೆ ಮಾಡಿಲ್ಲ. ಅದನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿತ್ತು. ಈ ಬಾರಿ ಹಾಗಿಲ್ಲ. ಲೋಕಸಭೆ ಕ್ಷೇತ್ರದ 8 ವಿಧಾನ ಸಭೆಯಲ್ಲಿ 5 ಕಾಂಗ್ರೆಸ್ ಶಾಸಕರೇ ಇದ್ದೇವೆ. ಒಳ್ಳೆಯ ಕ್ರಿಯಾಶೀಲ ಕಾರ್ಯಕರ್ತರ ಪಡೆ ಇದೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಶ್ರೀ ರಕ್ಷೆ ಸಿಗಲಿದೆ. ಕಿತ್ತೂರು ಖಾನಾಪುರ, ಉತ್ತರ ಕನ್ನಡ ಜಿಲ್ಲೆ ಎಲ್ಲ ಕಡೆ ಅತ್ಯುತ್ತಮ ಬೆಂಬಲ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ಮಾಡುವುದು ಕಷ್ಟವಾಗಿದೆ. ಇದರಿಂದ ಜನರು ಬೇಸತ್ತಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು. ಈ ಬಾರಿ ಅಂಜಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಮನೆ ಗಟ್ಟಿಯಾಗಿದೆ. ವಿಶ್ವೇಶ್ವರ ಹೆಗಡೆ ಅವರಿಗೂ ಕಿತ್ತೂರು ಖಾನಾಪುರ ಹೆಚ್ಚು ಪರಿಚಯವಿಲ್ಲ. ಹಾಗೆಯೇ ಅಂಜಲಿಗೂ ಉತ್ತರ ಕನ್ನಡ ಪರಿಚಯ ಮಾಡಿಕೊಳ್ಳಬೇಕು. ಇದೆಲ್ಲ ಚುನಾವಣೆಯಲ್ಲಿ ಸಮಾನ್ಯ ಎಂದರು.
ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ದೀಪಕ ದೊಡ್ಡೂರು ಮತ್ತಿತರರು ಇದ್ದರು.