Slide
Slide
Slide
previous arrow
next arrow

ಮಾ.16,17ಕ್ಕೆ ಕಡತೋಕಾದಲ್ಲಿ ‘ಯಕ್ಷರಂಗೋತ್ಸವ-24’

300x250 AD

ಹೊನ್ನಾವರ: ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ದಿವಂಗತ ಕಡತೋಕಾ ಮಂಜುನಾಥ ಭಾಗವತ ಇವರ ಸಂಸ್ಮರಣೆಯ ಕಡತೋಕಾ ಕೃತಿ-ಸ್ಮೃತಿ ಯಕ್ಷರಂಗೋತ್ಸವವು ಈ ಬಾರಿ ತಾಲೂಕಿನ ಕಡತೋಕಾದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಾರ್ಚ್ 16 ಮತ್ತು 17ರಂದು ನಡೆಯಲಿದೆ.

16 ರಂದು ಅಪರಾಹ್ನ 4 ಗಂಟೆಗೆ ಯಕ್ಷರಂಗೋತ್ಸವವನ್ನು ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟಣ್ಣವರ ಅವರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಹಿರಿಯ ಕಲಾವಿದರಾದ ಮಂಜುನಾಥ ಭಂಡಾರಿ ಕಡತೋಕಾ ಹಾಗೂ ಕುಮಟಾದ ಆಂಜನೇಯ ಖ್ಯಾತಿಯ ಕಲಾವಿದ ಗಣಪತಿ ನಾಯ್ಕ ಇವರಿಬ್ಬರನ್ನು ಸನ್ಮಾನಿಸಿ ಗೌರವಿಸಲಾಗುವುದು. ಖ್ಯಾತ ಅರ್ಥಧಾರಿ ಉಜರೆ ಅಶೋಕ ಭಟ್ಟ ಅವರು ದಿವಂಗತರ ಕುರಿತು ಸಂಸ್ಮರಣ ನುಡಿಗಳನ್ನು ಆಡಲಿದ್ದಾರೆ. ವೇದಿಕೆಯಲ್ಲಿ ಭಟ್ಕಳ ಮಾಜಿ ಶಾಸಕ ಸುನಿಲ್ ನಾಯ್ಕ್, ಶಿರಸಿಯ ಜೀವ ಜಲ ಕಾರ್ಯಪಡೆಯ ಮುಂದಾಳು ಶ್ರೀನಿವಾಸ ಹೆಬ್ಬಾರ್, ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಉದ್ಯಮಿಗಳಾದ ಮುರಳೀಧರ ಪ್ರಭು ಕುಮಟಾ, ಎನ್.ಆರ್.ಹೆಗಡೆ ರಾಘೋಣ, ಶಿರಸಿಯ ನ್ಯಾಯವಾದಿ ಜಿ.ಎನ್.ಹೆಗಡೆ ಮುರೇಗಾರ್, ಕಡತೋಕದ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಶಂಭು ಭಟ್, ಉಡುಪಿಯ ಹವ್ಯಾಸೀ ಕಲಾವಿದ ರಘುನಾಥ ನಾಯಕ್ ಹಾಗೂ ನ್ಯಾಯವಾದಿ ಸತೀಶ ಭಟ್ ಉಳಗೆರೆ ಅವರುಗಳು ಅಭ್ಯಾಗತರಾಗಿ ಉಪಸ್ಥಿತರಿರಲಿದ್ದಾರೆ.

ನಂತರ ‘ಕರ್ಣಪರ್ವ’ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯಲ್ಲಿ ಕೊಳಗಿ ಕೇಶವ ಹೆಗಡೆ, ಜೋಗಿಮನೆ ಗೋಪಾಲಕೃಷ್ಣ ಭಟ್, ಉಜರೆ ಅಶೋಕ ಭಟ್, ಡಾ.ಎಂ.ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ಪವನ ಕಿರಣಕೆರೆ ಮೊದಲಾದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
17 ರಂದು ಮುಂಜಾನೆ 9.30ರಿಂದ ವಿನೂತನ ’ಅರ್ಥಾಂತರಂಗ’ ಎಂಬ ಕಾರ್ಯಕ್ರಮ ನಡೆಯಲಿದೆ. ಅರ್ಥಾಂತರಂಗದಲ್ಲಿ ಯಕ್ಷಗಾನ ಕಲಾವಿದರಿಗೆ ಮಾತುಗಾರಿಕೆಯಲ್ಲಿ ವಿಶೇಷವಾದ ತರಬೇತಿಯನ್ನು ನೀಡಲಾಗುತ್ತದೆ. ಈ ಅರ್ಥಾಂತರಂಗವನ್ನು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಉದ್ಘಾಟಿಸಲಿದ್ದಾರೆ. ಖ್ಯಾತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಅರ್ಥಾಂತರಂಗದಲ್ಲಿ ಪ್ರಸಿದ್ಧ ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್ ಹಾಗೂ ವಾಸುದೆವ ರಂಗಾ ಭಟ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

300x250 AD

ಅಪರಾಹ್ನ 3 ಗಂಟೆಯಿಂದ 5 ಗಂಟೆಯ ವರೆಗೆ ಸಾಗರದ ಪುರಪ್ಪೆಮನೆಯ ಸಾಕೇತ ಕಲಾವಿದರಿಂದ ರಾಮನಿರ್ಯಾಣ ಎಂಬ ಆಟ ಪ್ರದರ್ಶನಗೊಳ್ಳಲಿದೆ. 5 ಗಂಟೆಯಿಂದ ಕೆ.ಡಿ.ಸಿ.ಸಿ.ಬ್ಯಾಂಕ್‌ನ ನಿರ್ದೇಶಕ ಕಡತೋಕಾ ಶಿವಾನಂದ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಈ ವೇದಿಕೆಯಲ್ಲಿ ಹಿರಿಯ ಯಕ್ಷಗಾನ ಸಾಧಕರಾದ ವಿರೂಪಾಕ್ಷ ಹೆಗಡೆ ಶೀಗೇಹಳ್ಳಿ ಹಾಗೂ ಕೆ.ಜಿ.ರಾಮ ರಾವ್ ಪುರಪ್ಪೆಮನೆ ಇವರಿಬ್ಬರನ್ನೂ ಸನ್ಮಾನಿಸಲಾಗುವುದು. ವೇದಿಕೆಯಲ್ಲಿ ಗಣ್ಯರಾದ ಸಿದ್ದಾಪುರದ ನ್ಯಾಯವಾದಿ ಆರ್.ಎಂ.ಹೆಗಡೆ ಬಾಳೆಸರ, ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟ, ಸಾಮಾಜಿಕ ಮುಖಂಡ ವಿವೇಕ ಜಾಲಿಸತ್ಗಿ ಕತಗಾಲ್, ಮೂರೂರಿನ ವಿದ್ಯಾನಿಕೇತನ ಪ್ರೌಢಶಾಲೆಯ ಕಾರ್ಯಾಧ್ಯಕ್ಷರಾದ ಆರ್.ಜಿ.ಭಟ್ ಕಲ್ಲಾರೆಮನೆ, ಕಡ್ಲೆ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಗೋವಿಂದ ಗೌಡ, ಆರ್.ಜಿ.ಪಿಆರ್.ಎಸ್.ನ ಜಿಲ್ಲಾ ಸಂಚಾಲಕ ವಿನೋದ ನಾಯ್ಕ್ ಹಾಗೂ ವಿನಾಯಕ ಹೆಗಡೆ ಸಿ.ಎ.ಕೂಜಳ್ಳಿ ಇವರುಗಳು ಅಭ್ಯಾಗತರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ನಂತರ 6 ಗಂಟೆಯಿಂದ ತಾಳಮದ್ದಳೆ ಭೀಷ್ಮ ವಿಜಯ ನಡೆಯಲಿದೆ. ಇದರಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪರಮೇಶ್ವ ಭಂಡಾರಿ ಕರ್ಕಿ, ಗಜಾನನ ಹೆಗಡೆ ಸಾಂತೂರು, ಡಾ.ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾ ಭಟ್, ಪವನ ಕಿರಣಕೆರೆ ಹಾಗೂ ಗುರುಪ್ರಸಾದ ಭಟ್ ಮಾಡಗೇರಿ ಮೊದಲದ ಕಲಾವಿದರು ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಈ ಯಕ್ಷರಂಗೋತ್ಸವವು ನಡೆಯುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top