ದಾಂಡೇಲಿ : ನಗರದಾದ್ಯಂತ ಮಾ.3ರಂದು ನಡೆಯಲಿರುವ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನದ ಕುರಿತಾಗಿ ನಗರದ ರೋಟರಿ ಕ್ಲಬ್ ಹಾಗೂ ರೋಟರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಶನಿವಾರ ರೋಟರಿ ಶಾಲೆಯ ಆವರಣದಿಂದ ಆರಂಭಿಸಲಾಯಿತು.
ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಜಾಗೃತಿ ಜಾಥಾಕ್ಕೆ ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಿಯೋ ಪಿಂಟೋ ಅವರು ಚಾಲನೆಯನ್ನು ನೀಡಿ ಮಾತನಾಡುತ್ತಾ, ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕು. ಮಾ. 3ರಂದು ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನದ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಕ್ಲಬ್ ಜಾಗತಿಕ ಮಟ್ಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆರೋಗ್ಯವಂತ ಮಗು ಈ ದೇಶದ ಸಂಪತ್ತು. ಈ ನಿಟ್ಟಿನಲ್ಲಿ ಪ್ರತಿಯೊಂದು ಮಗುವಿನ ಆರೋಗ್ಯವು ಅತೀ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜೋಸೆಫ್ ಗೊನ್ಸಾಲಿಸ್, ರೋಟರಿ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ರೋಟರಿ ಕ್ಲಬ್ಬಿನ ಪ್ರಮುಖರುಗಳಾದ ಪಿ.ವಿ. ಹೆಗಡೆ, ಪ್ರಕಾಶ್ ಕಣಿಮೆಹಳ್ಳಿ, ಶೇಖರ್ ಪೂಜಾರಿ, ಡಾ.ಅನೂಪ್ ಮಾಡ್ದೋಳ್ಕರ್, ರೋಟರಿ ಕ್ಲಬ್ಬಿನ ಸದಸ್ಯರು, ರೋಟರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಕಲ್ಪನಾ ನಾಯಕ್, ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಜಿ.ಪತ್ತಾರ್ ಹಾಗೂ ರೋಟರಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದವರು, ರೋಟರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೋಟರಿ ಶಾಲೆಯ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ರೋಟರಿ ಶಾಲೆಯ ಆವರಣದಲ್ಲಿ ಸಂಪನ್ನಗೊಂಡಿತು.