ಹೊನ್ನಾವರ: ಮಡಿವಾಳ ಸಮಾಜವು ಸಂಘಟಿತರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದು ಅಭಿವೃದ್ದಿ ಹೊಂದಬೇಕು ಎಂದು ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಸಲಹೆ ನೀಡಿದರು.
ಪಟ್ಟಣದ ಮಡಿವಾಳಹಳ್ಳದ ಲಕ್ಷ್ಮಿ ದೇವಯ್ಯ ಸಭಾಭವನದಲ್ಲಿ ಭಾನುವಾರ ತಾಲೂಕು ಮಡಿವಾಳ ಸಂಘದ 24ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಡಿವಾಳ ಸಮಾಜದವರು ಪ್ರಾಮಾಣಿಕರು, ಶೃದ್ಧೆಯಿಂದ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಸಂಘಟನೆ ಹಾಗೂ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಫೌಂಡರ್ ಆಫ್ ಸಂಜೀವಿನಿ ಪೌಂಡೇಶನ್ ಭಾಸ್ಕರ ಚಂದಾವರ ಮಾತನಾಡಿ ಸಮಾಜದವರಲ್ಲಿ ಚಿಕ್ಕ ಸಮಾಜ ಎನ್ನುವ ಅಳಕು ಇದೆ. ಶೈಕ್ಷಣಿಕವಾಗಿ ರಾಜಕೀಯವಾಗಿ ಇನ್ನಷ್ಟು ಸಾಧನೆ ಮಾಡುವ ಮೂಲಕ ಇತರೆ ಸಮಾಜದಂತೆ ಮುನ್ನೆಲೆಗೆ ಬರಬೇಕಿದೆ ಎಂದರು.
ಪತ್ರಕರ್ತ ವಿಶ್ವನಾಥ ಸಾಲ್ಕೋಡ್ ಮಾತನಾಡಿ ಸಮಾಜದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪೊತ್ಸಾಹಿಸುವ ಮೂಲಕ ಅವರ ಸಾಧನೆಗೆ ಪ್ರೇರೇಪಿಸುವ ಕಾರ್ಯವಾಗುತ್ತಿದೆ. ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರದಲ್ಲಿಯೂ ಸಾಧನೆಗೆ ಅವಕಾಶವಿದ್ದು, ಆ ರಂಗದತ್ತ ವಿದ್ಯಾರ್ಥಿಗಳು ಮುನ್ನಡೆದಾಗ ಪಾಲಕರು ಪೋತ್ಸಾಹಿಸುವ ಕಾರ್ಯವಾಗಬೇಕು. ರಜತ ಮಹೋತ್ಸವದ ಹೊಸ್ತಿಲಿನಲ್ಲಿರುವ ಸಂಘವು ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡುವತ್ತ ಸಾಗಲಿ ಎಂದರು
ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಎಲ್ಲಾ ಸಮಾಜವು ಒಗ್ಗೂಡಿ ಹಿಂದು ಧರ್ಮವಾಗಿದೆ. ಸಮಾಜದವರೆಲ್ಲರೂ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಜಾಗೃತರಾಗಬೇಕು. ದೇಶ, ಧರ್ಮದ ಬಗ್ಗೆ ಅಭಿಮಾನ ಮೂಡಿದಾಗ ಮಾತ್ರ ಅಂತಹ ವ್ಯಕ್ತಿಯಿಂದ ಸಮಾಜದ ಏಳ್ಗೆ ಸಾಧ್ಯವಿದೆ. ಸಮಾಜದ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಆಚರಣೆಯ ಮಹತ್ವ ಸಮಾಜದ ಸಾಧಕರನ್ನು ಪರಿಚಯಿಸಿದಾಗ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಶೈಕ್ಷಣಿಕ, ಕ್ರೀಡೆ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ಆನಂದ ಮಡಿವಾಳ ವಹಿಸಿದ್ದರು. ಡಿ.ಡಿ.ಮಡಿವಾಳ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ನಾಗೇಶ ಮಡಿವಾಳ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿನಾಯಕ ಮಡಿವಾಳ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಶಿವಾನಂದ ಮಡಿವಾಳ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಸಮಾಜದ ಅನೇಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.