ಹಳಿಯಾಳ: ಕೆಎಲ್ಎಸ್ ವಿಡಿಐಟಿ ಹಳಿಯಾಳದ ಪ್ರಥಮ ವರ್ಷದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಗೆ ಫೆಬ್ರುವರಿ 24ರಂದು ಭೇಟಿ ನೀಡಿದ್ದರು. ಫೆಬ್ರುವರಿ 24ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಕ್ತ ದಿನವಾದ ಪ್ರಯುಕ್ತ ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನ ಸಂಸ್ಥೆಯಲ್ಲಿ ನಡೆಯುತ್ತಿರುವ ನೂತನ ತಂತ್ರಜ್ಞಾನ ಆವಿಷ್ಕಾರದ ಕುರಿತು ಮಾಹಿತಿ ಪಡೆದರು.
ಸಿಎನ್‌ಸಿ ಯಂತ್ರ, 3ಡಿ ಪ್ರಿಂಟರ್ , ಸೂಪರ್ ಕಂಪ್ಯೂಟರ್, ಎರೋ ಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಆಗುತ್ತಿರುವ ನೂತನ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಡಾ. ಆರ್ ಎಸ್ ಮುನ್ನೊಳ್ಳಿ, ಡಾ. ಸಮೀರ್ ಗಲಗಲಿ, ಪ್ರೊ. ಸುಧೀರ್ ಕುಲಕರ್ಣಿ, ಡಾ. ಮೀನಲ್ ಕಲಿವಾಲ್ ಮತ್ತು ಡಾ. ಸ್ನೇಹಾ ಕುಲಕರ್ಣಿ ಇವರೊಂದಿಗೆ 70 ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿದ್ದರು.
ಎಲೆಕ್ಟ್ರಿಕಲ್ ವಿಭಾಗದ ಐದನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಫೆಬ್ರುವರಿ 23 ರಂದು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲ ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ, 150 ಮೆಗಾ ವ್ಯಾಟ್ ಸಾಮರ್ಥ್ಯದ ಈ ಜಲ ವಿದ್ಯುತ್ ಸ್ಥಾವರದಲ್ಲಿ ಪ್ರಚ್ಚನ್ನ ಶಕ್ತಿಯನ್ನು ಚಲನಶಕ್ತಿಯನ್ನಾಗಿ ಪರಿವರ್ತಿಸಿ ತದನಂತರ ಯಾಂತ್ರಿಕ ಶಕ್ತಿಯನ್ನಾಗಿ ಮಾರ್ಪಡಿಸಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಪ್ರಕ್ರಿಯೆ ಸಂಪೂರ್ಣ ವಿವರ ಪಡೆದುಕೊಂಡರು. ಜಲಚಕ್ರ, ಜನರೇಟರ್, ವಿದ್ಯುತ್ ಪರಿವರ್ತಕ, ಅಣೆಕಟ್ಟಿನ ಮಾಹಿತಿಯನ್ನು ಸಹಾಯಕ ಅಭಿಯಂತರರಾದ ಅರುಣ್ ಜಿ ಇವರಿಂದ ಪಡೆದುಕೊಂಡರು. ಪ್ರೊ. ಸುಬ್ರಮಣ್ಯ ಹೆಗಡೆ ಮತ್ತು ಮಹಾಬಲೇಶ್ವರ ಪೂಜಾರಿ ಇವರೊಂದಿಗೆ 55 ವಿದ್ಯಾರ್ಥಿಗಳು ಜನ ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದರು. ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ಅಲ್ಲಮ ಪ್ರಭು ಕೊಳಕಿ ಈ ಕಾರ್ಯಕ್ರಮ ಸಂಯೋಜಿಸಿದ್ದರು. ತಂತ್ರಜ್ಞಾನ ಹಾಗೂ ವಿಜ್ಞಾನ ವಿಭಾಗದಲ್ಲಿ ಆಗುತ್ತಿರುವ ನೂತನ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಕದ್ರಾ ಜಲ ವಿದ್ಯುತ್ ಸ್ಥಾವರದ ಭೇಟಿಯನ್ನು ಆಯೋಜಿಸಲಾಗಿತ್ತು ಎಂದು ಪ್ರಾಚಾರ್ಯ ಡಾ. ವಿ. ಎ. ಕುಲಕರ್ಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.