ಶಿರಸಿ: ಶಾಂತಾರಾಮ ಹೆಗಡೆ ಅವರು ಸಹಕಾರ ಕ್ಷೇತ್ರದ ಮಾದರಿ ಶಕ್ತಿ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ನಗರದ ಟಿಆರ್‌ಸಿ ಹಾಲ್‌ನಲ್ಲಿ ಶಾಂತಾರಾಮ ಹೆಗಡೆ ವೆಲ್‌ಫೇರ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ದಿವಂಗತ ಶಾಂತಾರಾಮ ಹೆಗಡೆ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಂತಾರಾಮ ಹೆಗಡೆ ಸಹಕಾರ ಕ್ಷೇತ್ರದ ಅದ್ವಿತೀಯ ನಾಯಕ. ಅವರು ಸರಳತೆ, ಎಲ್ಲರನ್ನೂ ಒಟ್ಟಗೂಡಿಸಿಕೊಂಡು ಹೋಗುವ ಗುಣ ಹಾಗೂ ತ್ಯಾಗದ ಕಾರಣದಿಂದ ಸಹಕಾರಿ ಸಂಸ್ಥೆ ಬೆಳೆಯುವುದಕ್ಕೆ ಕಾರಣವಾಗಿದೆ. ಶೋಷಣಾ ರಹಿತ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸಿದ್ದರು. ಅಡಕೆ ಬೆಳೆಗಾರರಿಗೆ ರಕ್ಷಣೆ ನೀಡಿದ್ದರು. ಸಹಕಾರ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸಿದರು. ಗಂಭೀರ ಮಾರ್ಗದರ್ಶನ ನೀಡಿದ್ದರು ಎಂದರು. ಶಾಂತಾರಾಮ ಹೆಗಡೆ ನನ್ನ ಹಿತೈಷಿ ಹಾಗೂ ಮಾರ್ಗದರ್ಶಕರಾಗಿದ್ದರು. ಹಿಂದೆ ಅಡಕೆಗೆ ಕನಿಷ್ಟ ಬೆಂಬಲ ಬೆಲೆ ನೀಡುವ ನಿರ್ಧಾರದ ಹಿಂದಿನ ಶಕ್ತಿ ಶಾಂತಾರಾಮ ಹೆಗಡೆ ಅವರಾಗಿದ್ದರು ಎಂದರು.
ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಶಾಂತಾರಾಮ ಹೆಗಡೆ ಅವರು ಸಜ್ಜನಿಕೆ, ಪ್ರಾಮಾಣಿಕತೆ, ಸಭ್ಯತೆ, ಸಹಾಯ ಮಾಡುವ ಗುಣ ಹೊಂದಿದ್ದರು. ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ಟಿಎಸ್‌ಎಸ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಲವು ಸಂಘಸಂಸ್ಥೆಗಳ ಜವಾಬ್ದಾರಿ ತೆಗದುಕೊಂಡು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಅವರ ನಿಧನ ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರವಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ದೊಡ್ಡ ನಷ್ಟವಾಗಿದ್ದು ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ಪ್ರಗತಿಪರ ಕೃಷಿಕ ವಿಶ್ವಾಸ್ ಬಲ್ಸೆ, ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಮುಂತಾದವರು ಮಾತನಾಡಿದರು. ಮುಖಂಡರಾದ ದೀಪಕ ಹೆಗಡೆ ದೊಡ್ಡೂರು, ಅಬ್ಬಾಸ್ ತೋನ್ಸೆ, ಜಗದೀಶ ಗೌಡ ಮುಂತಾದವರು ಪಾಲ್ಗೊಂಡರು. ಎಸ್.ಕೆ.ಭಾಗ್ವತ ಸ್ವಾಗತಿಸಿದರು. ಶ್ರೀಪಾದ ಹೆಗಡೆ ಕಡವೆ ನಿರೂಪಿಸಿದರು. ಶಶಾಂಕ ಹೆಗಡೆ ವಂದಿಸಿದರು.
ಕಾಂಗ್ರೆಸ್‌ನ ಸಂಕಷ್ಟದ ಕಾಲದಲ್ಲಿ ಜಿಲ್ಲಾಧ್ಯಕ್ಷರಾಗಿ ಶಾಂತಾರಾಮ ಹೆಗಡೆ ಶಿಸ್ತುಬದ್ಧವಾಗಿ ಕೆಲಸ ಮಾಡಿದ್ದರು. ಹಾಗಂತ ಪಕ್ಷ ಅಧಿಕಾರಕ್ಕೆ ಬಂದಾಗ ಯಾವ ಅಧಿಕಾರ ಅಪೇಕ್ಷೆ ಮಾಡಿರಲಿಲ್ಲ.– ಆರ್.ವಿ.ದೇಶಪಾಂಡೆ, ಅಧ್ಯಕ್ಷ, ರಾಜ್ಯ ಆಡಳಿತ ಸುಧಾರಣಾ ಆಯೋಗ