ಯಲ್ಲಾಪುರ: ಕ್ರಿಕೆಟ್ ಆಟಗಾರರು ಕೇವಲ ಕ್ರಿಕೆಟ್ ಒಂದನ್ನೇ ಅಭ್ಯಾಸ ಮಾಡುವುದಿಲ್ಲ. ಇದರೊಂದಿಗೆ ಫುಟ್‌ಬಾಲ್, ಸ್ಕಿಪ್ಪಿಂಗ್ ಇತ್ಯಾದಿಗಳಲ್ಲಿಯೂ ತೊಡಗಿಕೊಳ್ಳುತ್ತಾರೆ. ಇದು ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪೂರಕವಾಗಿರುತ್ತವೆ. ಅಂತೆಯೇ, ಪುಸ್ತಕಗಳಲ್ಲಿರುವ ಪಾಠಗಳಿಗೆ ಪೂರಕವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಮೆಟ್ರಿಕ್ ಮೇಳ, ವಿಜ್ಞಾನ ಮೇಳ, ಕಲಿಕಾ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಆರ್‌ಸಿ ಸಮನ್ವಯಾಧಿಕಾರಿ ಸಂತೋಷ ಜಿಗಳೂರು ಹೇಳಿದರು.
ಅವರು ತಾಲೂಕಿನ ಮಾಗೋಡ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೆಟ್ರಿಕ್ ಮೇಳ, ವಿಜ್ಞಾನ ಮೇಳ, ಕಲಿಕಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಇಂದಿಗೂ ಹಿಂದಿನ ಮಾದರಿಯ ಶಿಕ್ಷಣ ಪದ್ಧತಿಗಳನ್ನೇ ಅನುಸರಿಸಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಇಂತಹ ಪೂರಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಂದೊಳ್ಳಿ ಕ್ಲಸ್ಟರ್ ಸಿಆರ್‌ಪಿ ಮೋಹನ್ ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶವಾಗಿದ್ದರೂ ಮಾಗೋಡ ಕಾಲೋನಿ ಶಾಲೆಯ ಪ್ರಗತಿ ಉತ್ತಮವಾಗಿದೆ. ಇಲಾಖೆಯಿಂದ ಯಾವುದೇ ಹೊಸ ಕಾರ್ಯಕ್ರಮಗಳು ಜಾರಿಯಾದರೂ ಈ ಶಾಲೆಯ ಶಿಕ್ಷಕರು ಉತ್ಸಾಹದಿಂದ ಜಾರಿಗೆ ತರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹ ಭಟ್, ಯಲ್ಲಾಪುರ ಸಿಆರ್‌ಪಿ ಎಸ್.ಬಿ. ವೆರ್ಣೇಕರ್ ಮಾತನಾಡಿದರು.
ಮುಖ್ಯೋಪಾಧ್ಯಾಯಿನಿ ಶಶಿಕಲಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಶೈಲಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕ ವಿನಾಯಕ ಗಾಂವಕರ್‌ವಂದಿಸಿದರು. ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳು, ರಂಗೋಲಿ ಪ್ರದರ್ಶನಗಳು ಗಮನಸೆಳೆದವು.