ಶಿರಸಿ : ಇಲ್ಲಿಯ ಜನನಿ ಮ್ಯೂಜಿಕ ಸಂಸ್ಥೆಯಿಂದ “ಯುವಧ್ವನಿ” ಎಂಬ ವಿಶೇಷ ಸಂಗೀತ ಕಾರ್ಯಕ್ರಮವು ಫೆ. 17 ಮತ್ತು 18 ರಂದು ನಗರದ ಟಿ. ಎಮ್. ಎಸ್. ಸಭಾಭವನದಲ್ಲಿ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಭಾಭವನದಲ್ಲಿ ‘ಮಮತೆಯ ಸನ್ಮಾನ’ ಹಾಗೂ ‘ಯುವಧ್ವನಿಗಾಗಿ ಉಧ್ಯೋತನ’ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಮಮತೆಯ ಸನ್ಮಾನವನ್ನು ಸಂಸ್ಥೆಯ ಪಾಲಕರಾದ ಶಾಂತಲಾ ಮತ್ತು ಗಣೇಶ ಕೂರ್ಸೆರವರಿಗೆ ನಡೆಸಲಾಗುತ್ತಿದ್ದು ಯುವಧ್ವನಿಗಾಗಿ ಉಧ್ಯೋತನ ಪುರಸ್ಕಾರವನ್ನು ಯುವ ಗಾಯಕಿಯಾದ ಮಹಿಮಾ ಕಿರಣ, ಮಧುಶ್ರೀ ಶೇಟ್, ಸ್ನೇಹಾ ಅಮ್ಮಿನಳ್ಳಿ, ಸಂಪದಾ ಎಸ್. ಹಾಗೂ ಮಾನಸಾ ಹೆಗಡೆ ಯವರಿಗೆ ನೀಡಲಾಗುತ್ತಿದೆ.
ಫೆ.17, ಶನಿವಾರ ಸಂಜೆ 7-30 ಕ್ಕೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್. ವಿ. ದೇಶಪಾಂಡೆ ಉದ್ಘಾಟಿಸಲಿದ್ದು ಅತಿಥಿಗಳಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಶಿರಸಿ ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ ವಹಿಸಲಿದ್ದು, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್. ಜಿ. ನಾಯ್ಕ ಹಿರಿಯ ಸಂಪಾದಕ, ಅಶೋಕ ಹಾಸ್ಯಗಾರ, ಗೋಳಿ ಸಿದ್ಧಿ ವಿನಾಯಕ ದೇವಸ್ಥಾನದ ಅಧ್ಯಕ್ಷ ಎಂ. ಎಲ್. ಹೆಗಡೆ ಹಲಸಿಗೆ ಉಪಸ್ಥಿತರಿರಲಿದ್ದಾರೆ.
ಶನಿವಾರ ಮಧ್ಯಾಹ್ನ 3-30 ರಿಂದ ಸಂಸ್ಥೆಯ ಹಿರಿಯ-ಕಿರಿಯ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು ನಂತರದಲ್ಲಿ ಸಂಪದಾ ಎಸ್., ಭೂಮಿ ದಿನೇಶ ತಮ್ಮ ಗಾನ ನಡೆಸಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಹಾರ್ಮೊನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಧಾರವಾಡ ಸಹಕರಿಸಲಿದ್ದಾರೆ.
ಪ್ರಥಮ ದಿನದ ಕೊನೆಯ ಕಾರ್ಯಕ್ರಮವಾಗಿ ವಿದುಷಿ ರೇಖಾ ದಿನೇಶ ತಮ್ಮ ತಮ್ಮ ಸಂಗೀತ ಕಛೇರಿ ನಡೆಸಿಕೊಡಲಿದ್ದು ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೊನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಹಾಗೂ ತಾಳದಲ್ಲಿ ಅನಂತಮೂರ್ತಿ ಸಹಕರಿಸಲಿದ್ದಾರೆ.
ಫೆ.18, ರವಿವಾರ ಬೆಳಿಗ್ಗೆ 10 ರಿಂದ ಪುನಃ ವಿದ್ಯಾರ್ಥಿಗಳ ಗಾಯನ ಆರಂಭಗೊಳ್ಳಲಿದ್ದು ನಂತರದಲ್ಲಿ ಮಹಿಮಾ ಕಿರಣ, ಸ್ನೇಹಾ ಅಮ್ಮಿನಳ್ಳಿ, ಮಾನಸಾ ಹೆಗಡೆ ತಮ್ಮ ಗಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಿರಣ ಹೆಗಡೆ ಕಾನಗೋಡ, ವಿಜಯೇಂದ್ರ ಅಜ್ಜಿಬಳ, ಚೇತನಕುಮಾರ ಇನಾಮದಾರ್ ತಬಲಾದಲ್ಲಿ ಹಾಗೂ ಉನ್ನತಿ ಕಾಮತ್ ಹಾರ್ಮೊನಿಯಂನಲ್ಲಿ ಸಹಕರಿಸಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ವಿಶೇಷ ಸಂಗೀತದಲ್ಲಿ ಕೊನೆಯ ಕಾರ್ಯಕ್ರಮವಾಗಿ ಆಮಂತ್ರಿತ ಕಲಾವಿದೆ ಗಾಯಕಿ ವಿದುಷಿ ವಸುಧಾ ಶರ್ಮಾ ಸಾಗರ ತಮ್ಮ ಸಂಗೀತ ಕಛೇರಿ ನಡೆಸಿಕೊಡಲಿದ್ದು ತಬಲಾದಲ್ಲಿ ಗುರುರಾಜ ಆಡುಕಳ, ಹಾಗೂ ಹಾರ್ಮೊನಿಯಂನಲ್ಲಿ ಸಂವತ್ಸರ ಕೆ. ಸಾಗರ ಸಾಥ್ ನೀಡಲಿದ್ದಾರೆ ಎಂದು ಜನನಿ ಮ್ಯೂಜಿಕ ಸಂಸ್ಥೆ ಅಧ್ಯಕ್ಷ ದಿನೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.