ಕಾರವಾರ: ಸಮಾಜದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯ್ಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ. ರಾಯ್ಕರ್ ಹೇಳಿದರು.
ಅವರು ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಭಾಗಿದಾರರಿಗೆ ಮತ್ತು ಕಾವಲು ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಒಂದು ಸಂಘಟಿತ ಅಪರಾಧವಾಗಿದ್ದು, ಒತ್ತಾಯ ಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಭಿಕ್ಷಾಟಣೆ, ಮತ್ತು ಕಾನೂನು ಬಾಹಿರ ಅಂಗಾಂಗಗಳ ಜೋಡಣೆ ಹಾಗೂ ಉದ್ಯೋಗದ ಬಗ್ಗೆ ಸುಳ್ಳು ಭರವಸೆ ರೂಪದಲ್ಲಿ ಮಹಿಳೆಯರು ಮತ್ತು ಮಕ್ಕಳು ಅನೈತಿಕ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ. ಇಂತವರನ್ನು ರಕ್ಷಿಸಿ ಸೂಕ್ತ ಪುನರ್ವಸತಿ ಒದಗಿಸಿ, ಸಮಾಲೋಚನೆ ಮೂಲಕ ಅವರಿಗೆ ಧೈರ್ಯ ತುಂಬುವ ಕಾರ್ಯವಾಗಬೇಕಿದೆ ಎಂದರು.
ಇತ್ತಿಚೀನ ದಿನಗಳಲ್ಲಿ ಯುವ ಜನತೆ ಸೋಷಿಯಲ್ ಮೀಡಿಯಾಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಮಾಡಿಕೊಂಡು, ತಮ್ಮ ಭಾವಚಿತ್ರಗಳನ್ನು ಹಾಗೂ ಸವಿವರಗಳನ್ನು ಹಂಚಿಕೊಳ್ಳುವುದು ಹೆಚ್ಚಾಗಿದೆ. ಯುವ ಜನತೆ ಸಾಮಾಜಿಕ ಜಾಲ ತಾಣಗಳಲ್ಲಿ ನೀಡುವ ಜಾಹೀರಾತುಗಳಿಗೆ ಮಾರು ಹೋಗದೇ ಜಾಗೃತರಾಗಿರಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ವಿರೂಪಾಕ್ಷಗೌಡ ಪಿ. ಪಾಟೀಲ್ ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗಾಗಿದ್ದು, ನಮ್ಮೊಳಗೆ, ನಮ್ಮಲ್ಲಿಯೇ ಒಬ್ಬರು ಇಂತಹ ಪ್ರಕರಣದಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ. ಹಾಗೂ ಮೊಬೈಲ್ ಬಳಕೆಯಿಂದ ಅನೇಕ ದುಷ್ಪರಿಣಾಮಗಳು ಸಂಭವಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚತರನ್ನು ಪರಿಚಯ ಮಾಡಿಕೊಳ್ಳುವಾಗ ಪ್ರತಿಯೊಬ್ಬರು ಎಚ್ಚರದಿಂದರಬೇಕು. ಇಲ್ಲವಾದಲ್ಲಿ ತಮಗೆ ಗೊತ್ತಿಲ್ಲದೇ ಮೋಸದ ಬಲೆಗೆ ಬೀಳುವಂತಾಗುತ್ತದೆ ಎಂದರು.
ನ್ಯಾಯವಾದಿ ಎ.ಆರ್.ಬಿ ಡಿಸೋಜಾ, ಲೀಗಲ್ ಕಂ ಪ್ರೊಬೇಷನ್ ಅಧಿಕಾರಿ ದೇವಿದಾಸ ನಾಯ್ಕ ಅವರು ಮಹಿಳಾ/ ಮಕ್ಕಳ ಕಳ್ಳ ಸಾಗಾಣಿಕೆ , ಕಾರಣಗಳು ಮತ್ತು ದುಷ್ಪರಿಣಾಮಗಳ ಮತ್ತು ತಡೆಗಟ್ಟುವಿಕೆ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಹಬೀಬಸಾಬ ಮುಲ್ಲಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಲತಾ ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಲಕ್ಷ್ಮಿದೇವಿ ಎಸ್. ವಿವಿಧ ಇಲಾಖೆ ಭಾಗಿದಾರರು, ಕಾವಲು ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.