ಹೊನ್ನಾವರ: ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಂವಿಧಾನವು ನಮಗೆಲ್ಲವನ್ನು ಕೊಟ್ಟಿದೆ. ನಾವು ಸಂವಿಧಾನವನ್ನು ಗೌರವಿಸಬೇಕು, ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಂ. ಭಂಡಾರಿ ನುಡಿದರು. ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿ.ಜಿ.ಹೆಗಡೆ ಗುಡ್ಗೆಯವರು ಮಾತನಾಡಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಪರಿಕಲ್ಪನೆ ನಮ್ಮಲ್ಲಿರಬೇಕು, ನಾವು ಗುರು ಹಿರಿಯರನ್ನು ಗೌರವಿಸಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಉಮೇಶ ಹೆಗಡೆ ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು.
ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿ.ಎಂ. ಭಂಡಾರಿಯವರನ್ನು ಸನ್ಮಾನಿಸಲಾಯಿತು.ಕು ಮನೋಜ್ ಭಟ್ ಪ್ರಾರ್ಥಿಸಿದನು, ಕು ಪವಿತ್ರ ಲೋಬೊ ಸ್ವಾಗತಿಸಿದಳು, ನಿಯತಿ ನಾಯಕ ವಂದಿಸಿದರೆ,ವಿಂಧ್ಯಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದ್ದಳು.