ಶಿರಸಿ: ತಾಲೂಕಿನ ಇಸಳೂರು ದಾನಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೫ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕ ವೃಂದ ಸೇರಿ ಶಿರಸಿ ಜೀವ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರಿಗೆ ಶಾಲು, ಸ್ಮರಣಿಕೆ, ಫಲ ತಾಂಬೂಲದೊಂದಿಗೆ ಸನ್ಮಾನಿಸಿ, ಹೃದಯಸ್ಪರ್ಶಿ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಗೌರವ ಸನ್ಮಾನ ಸ್ವೀಕರಿಸಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಸಮಾಜದಿಂದ ಗಳಿಸಿದ್ದರಲ್ಲಿ ಕೆಲವನ್ನು ಸಮಾಜಕ್ಕೆ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ರಕ್ಷಣೆಗಾಗಿ ನೀಡಿದಾಗ ಮನಸ್ಸಿಗೆ ನೆಮ್ಮದಿ, ಸಂತೋಷ ಉಂಟಾಗುತ್ತದೆ. ಜೊತೆಗೆ ಅನೇಕರಿಗೆ ಅದರಿಂದ ಸಹಾಯ ಕೂಡಾ ಆಗುತ್ತಿದ್ದು, ಅದು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದರು. ಒಂದು ಶಾಲೆ ಉದ್ದಾರವಾದರೆ ಸುತ್ತಲಿನ ಹಳ್ಳಿಯ ಮಕ್ಕಳು ಉದ್ದಾರವಾಗುತ್ತಾರೆ. ಅದರೊಂದಿಗೆ ಸುಸಂಸ್ಕೃತರಾಗಿ ಬೆಳೆದು ತಮ್ಮೂರಿಗೆ ಕೀರ್ತಿ ತಂದಾಗ, ಅಂತಹ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು. ಗೌರವ ಸನ್ಮಾನಕ್ಕೆ ಭಾವುಕರಾದ ಕೆರೆ ಹೆಬ್ಬಾರರು ಕೃತಜ್ಞತಾಭಾವ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಎಂದಿಗೂ ಮರೆಯದಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಪಿ.ಬಸವರಾಜ ಮಾತನಾಡಿ, ಸರ್ಕಾರದ ವ್ಯವಸ್ಥೆಯಲ್ಲಿ ಇರುವ ಸವಲತ್ತಿನಿಂದ ಪ್ರತಿಯೊಂದು ಶಾಲೆಯನ್ನು ನೋಡಿಕೊಳ್ಳಬೇಕಾಗಿದ್ದು ಸರ್ವತೋಮುಖ ಅಭಿವೃದ್ಧಿ ಒಂದೇ ಸಲ ಕಷ್ಟಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಸಮಾಜದ ದಾನಿಗಳು ಕೈಜೋಡಿಸಿದಾಗ ಹೆಚ್ಚಿನ ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂದರು. ಅತಿಥಿಗಳಾಗಿದ್ದ ಬಿಇಓ ನಾಗರಾಜ ನಾಯ್ಕ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಜಿ.ಆರ್.ಹೆಗಡೆ, ಎಂ.ಕೆ.ಮೊಗೇರ, ಇಸಳೂರು ಗ್ರಾಪಂ ಸದಸ್ಯ ನರೇಂದ್ರ ಶಾಸ್ತ್ರೀ ಬಿಸ್ಲಕೊಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ದಾನಂದಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರುಸು ಗೌಡ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಂಚಾಯತದ ಸದಸ್ಯ ಪಿ.ವಿ.ಹೆಗಡೆ ದೊಂಬೆಸರ ಅವರನ್ನು ಗೌರವಿಸಲಾಯಿತು. ಮುಖ್ಯಾಧ್ಯಾಪಕಿ ಗೀತಾಂಜಲಿ ಭಟ್ಟ ಗೌಡಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ನಾಗವೇಣಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ನಾಗವೇಣಿ ಗೌಡ ವಂದಿಸಿದರು.