ದಾಂಡೇಲಿ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದಾಂಡೇಲಿ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಗರದ ಎಲ್ಲ ದೇವಸ್ಥಾನಗಳನ್ನು ವಿಶೇಷ ಹೂವಿನ ಅಲಂಕಾರದ ಜೊತೆಗೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಶೃಂಗರಿಸಲಾಗಿದೆ. ನಗರದ ಕೆ.ಸಿ ವೃತ್ತ, ಲಿಂಕ್ ರಸ್ತೆ, ಜೆ.ಎನ್.ರಸ್ತೆ, ಸೋಮಾನಿ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ತಳಿರು ತೋರಣಗಳಿಂದ ಹಾಗೂ ಕೇಸರಿ ಪತಾಕೆಗಳಿಂದ ಶೃಂಗಾರಗೊಂಡಿದೆ. ರಸ್ತೆಯ ಅಲ್ಲಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದ ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿದೆ.
ದಾಂಡೇಲಿಯ ಆರಾಧ್ಯ ದೇವರಾದ ಸತ್ಪುರುಷ ಶ್ರೀದಾಂಡೇಲಪ್ಪನ ಸನ್ನಿಧಿಯಲ್ಲಿಯೂ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಳಗಿ ರಸ್ತೆಯ ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ಅಲ್ಲೇ ಇರುವ ಶ್ರೀದತ್ತ ಮಂದಿರದಲ್ಲಿ ಹಾಗೆಯೇ ನಗರದ ಬಂಗೂರುನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆಯಿಂದಲೇ ಪೂಜೆ, ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹಾಪೂಜೆಯಾದ ಬಳಿಕ ಪ್ರಸಾದ ವಿತರಣೆಯನ್ನು ಏರ್ಪಡಿಸಲಾಗಿತ್ತು. ಜೆ.ಎನ್ ರಸ್ತೆಯಲ್ಲಿರುವ ಶ್ರೀಮಾರುತಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀಛತ್ರಪತಿ ಶಿವಾಜಿ ಪುತ್ಥಳಿ ಆವರಣದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಳಿಯಾಳ ರಸ್ತೆಯ ಶ್ರೀ.ಮಾರುತಿ ಮಂದಿರದಲ್ಲಿ ಶ್ರೀಗಜಾನನ ಯುವಕ ಮತ್ತು ಯುವತಿ ಮಂಡಳದ ಆಶ್ರಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಹಳೆ ದಾಂಡೇಲಿಯ ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ಸಾಮೂಹಿಕ ಭಜನಾ ಕಾರ್ಯಕ್ರಮ, ಅಂಬೇವಾಡಿಯ ಶ್ರೀಮಹಾಗಣಪತಿ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಪ್ರಾರ್ಥನೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು. ಲಿಂಕ್ ರಸ್ತೆಯಲ್ಲಿರುವ ಶ್ರೀಹನುಮಾನ್ ಮಂದಿರದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಾಪೂಜೆಯ ಬಳಿಕ ಪ್ರಸಾದ ವಿತರಣೆಯನ್ನು ಏರ್ಪಡಿಸಲಾಗಿತ್ತು. ಕುಳಗಿ ರಸ್ತೆಯಲ್ಲಿರುವ ಶ್ರೀಆಂಜನೇಯ ದೇವಸ್ಥಾನದಲ್ಲಿಯೂ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಅಂಬೇವಾಡಿಯ ನಾಗದೇವತಾ ದೇವಸ್ಥಾನ, ನಿರ್ಮಲ ನಗರದ ಕಾಳಿಕಾ ಮಾತಾ ದೇವಸ್ಥಾನ, ಗಾಂಧಿನಗರದ ಶ್ರೀದುರ್ಗಾದೇವಿ, ದೇವಸ್ಥಾನ, ಟೌನಶಿಪ್ ಶ್ರೀಮಹಾಗಣಪತಿ ದೇವಸ್ಥಾನ, ಬಾಂಬುಗೇಟ್ ಹತ್ತಿರದ ಶ್ರೀದುರ್ಗಾಮಾತಾ ದೇವಸ್ಥಾನ, ಹಳೆ ದಾಂಡೇಲಿಯ ಶ್ರೀಲಕ್ಷ್ಮಿ ದೇವಸ್ಥಾನ, ಹಳೆ ದಾಂಡೇಲಿಯ ಶ್ರೀಈಶ್ವರ ದೇವಸ್ಥಾನ, ಹಳೆ ದಾಂಡೇಲಿಯ ಶ್ರೀಮಹಾಗಣಪತಿ ದೇವಸ್ಥಾನ, ಬೈಲುಪಾರಿನ ಶ್ರೀಹನುಮಾನ್ ಮಂದಿರ, ವಿಜಯನಗರದ ಶ್ರೀಬಾಲ ಹನುಮಾನ್ ಮಂದಿರ, ಟೌನಶಿಪ್ ಇಲ್ಲಿಯ ಶ್ರೀರಾಘವೇಂದ್ರ ಮಠ, ಡಿ.ಎಪ್.ಎಯಲ್ಲಿರುವ ಶ್ರೀಭುವನೇಶ್ವರಿ ಮಂದಿರ, ಸುಭಾಷ್ ನಗರದ ಶ್ರೀಪ್ರಸನ್ನ ಆಂಜನೇಯ ಮಂದಿರ, ಆಜಾದ್ ನಗರದ ಶ್ರೀವಿಠ್ಠಲ ರುಕ್ಮಯಿ ಮಂದಿರ, ವಿನಾಯಕಗರದ ಶ್ರೀಮಾರುತಿ ಮಂದಿರ, ಸುಭಾಷ್ ನಗರದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ, ಟಿಂಬರ್ ಡಿಪೋ ಆವರಣದಲ್ಲಿರುವ ಶ್ರೀಮಹಾಗಣಪತಿ ದೇವಸ್ಥಾನ ಮತ್ತು ಬಸ್ ನಿಲ್ದಾಣದ ಹತ್ತಿರದಲ್ಲಿರುವ ಶ್ರೀಮಹಾಗಣಪತಿ ದೇವಸ್ಥಾನದಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಒಟ್ಟಿನಲ್ಲಿ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.