ಹೊನ್ನಾವರ : ಇಲ್ಲಿನ ಜೈನಜಟಗೇಶ್ವರ ಯುವ ಸಮಿತಿಯಯವರು ಆಯೋಜಿಸಿದ್ದ ಟೊಂಕ ಉತ್ಸವ ಮತ್ತು ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಮುಂದಿನ ಪೀಳಿಗೆಯ ಸಮಗ್ರ ಹಿತದೃಷ್ಟಿಯಿಂದ ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಿಕ್ಕರೆ ಶಿಕಾರಿ, ಸಿಗದಿದ್ದರೆ ಭಿಕಾರಿ, ಎನ್ನುವುದು ಮೀನುಗಾರಿಕೆ ವೃತ್ತಿಯಲ್ಲಿನ ಗಳಿಕೆಯ ಬಗ್ಗೆ ಕರಾವಳಿಯ ಮೀನುಗಾರರಲ್ಲಿ ಮೊದಲಿನಿಂದಲೂ ಆತಂಕ ಇದೆ. ಅದು ಈಗ ಇನ್ನಷ್ಟು ಹೆಚ್ಚಾಗಿದೆ. ಮೀನಿನ ಬರ ಇದನ್ನು ಸಾರಿ ಸಾರಿ ಹೇಳುತ್ತಿದೆ. ಆದ್ದರಿಂದ ಕಡಲ ಮೀನುಗಾರಿಕೆಯನ್ನು ಅವಲಂಬಿಸಿರುವ ಎಲ್ಲರೂ ಮುಂದಿನ ತಮ್ಮಪೀಳಿಗೆಯ ಭವಿಷ್ಯದ ಬಗ್ಗೆ ಬದಲೀ ಮಾರ್ಗದ ಬಗ್ಗೆ ಚಿಂತನೆ ನಡೆಸಬೇಕು. ಜೀವನೋಪಾಯಕ್ಕೆ ಕಡಲ ಮೀನುಗಾರಿಕೆಯೊಂದನ್ನೇ ಅವಲಂಬಿಸುವುದು ಸರಿಯಲ್ಲ.ಅದರ ಬದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವಂತೆ ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈಗಿನಿಂದಲೇ ಸಮಾಜದಿಂದ ಆಗಬೇಕು ಎಂದು ಹೇಳಿದರು. ಇಲ್ಲಿನ ಜೈನಜಟಗೇಶ್ವರ ಯುವ ಸಮಿತಿಯು ಕಳೆದ 15 ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತರನ್ನು, ಸಾಧಕರನ್ನುಗುರುತಿಸಿ ಗೌರವಿಸುವ ಕೆಲಸ ಮಾಡುವ ಜೊತೆಗೆ ಕಡಲಾಮೆಗಳ ಸಂರಕ್ಷಣೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತ ಬಂದಿರುವ ಕಾರ್ಯದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಇವರ ಸಮಾಜ ಸೇವೆ ಮತ್ತು ಧರ್ಮ ವಿಷ್ಣು ನಾಯ್ಕ ಇವರ ಶೈಕ್ಷಣಿಕ ಕ್ಷೇತ್ರದಲ್ಲಿನ ಕಾರ್ಯಗಳನ್ನು ಗುರುತಿಸಿ ಗೌರವಿಸಿದ್ದು, ತನಗೆ ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ಸಮಾನತೆ ಹೇಗೆ ಮುಖ್ಯವೋ ಹಾಗೆಯೇ ಶೋಷಣೆಗೆ ಒಳಗಾಗುವವರ ಹಿತರಕ್ಷಣೆ ಮಾಡುವದು ಕೂಡ ನಾಗರಿಕ ಸಮಾಜದ ಕರ್ತವ್ಯವಾಗಿದೆ. ರಾಷ್ಟ್ರೀಯ ಮೀನುಗಾರರ ಸಂಘಟನೆಯ ಪ್ರತಿನಿಧಿಯಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಬಗ್ಗೆ ತನಗೆ ತ್ರಪ್ತಿಇದೆ. ಮುಂದೆಯೂ ಸಹ ಮೀನುಗಾರರ ಹಿತರಕ್ಷಣೆಗೆ ನನ್ನ ಮೊದಲ ಆದ್ಯತೆ ಇರಲಿದೆ. ಕಡಲತೀರಗಳ ಸ್ವಚ್ಛ ಪರಿಸರ ಹಾಗೂ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ನೂತನ ಮೀನುಗಾರಿಕೆ ಸಚಿವರಾಗಿರುವ ಮಂಕಾಳು ವೈದ್ಯರು ಸಂಕಷ್ಟದಲ್ಲಿರುವ ಈ ಭಾಗದ ಮೀನುಗಾರರ ಹಿತರಕ್ಷಣೆ ಮಾಡುವರೆಂಬ ಆಶಯವನ್ನು ವ್ಯಕ್ತಪಡಿಸಿರುವ ಅವರು,ಎಂದಿನಂತೆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಶಿಕ್ಷಕ ಧರ್ಮ .ವಿ. ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಇಂದು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಇದು ಅಡಿಪಾಯವಿದ್ದಂತೆ ಎಂದು ಸನ್ಮಾನಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲೋಹಿತ ತಾಂಡೇಲ್, ಶೈಕ್ಷಣಿಕ ಸಾಧನೆ ಮಾಡಿದ ವಿವಿಧ ಪ್ರತಿಭಾವಂತರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿ ಹೊನ್ನಾವರ ಫೌಂಡೇಷನ್ನಿನ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡುತ್ತ ಮೀನು ಈಗ ಜನರ ಪ್ರಮುಖ ಆಹಾರವಾಗಿದೆ. ಮೀನಿನ ಸಾಕಣೆ ಮತ್ತು ಉತ್ಪಾದನೆಯಲ್ಲಿ ಈಗ ಹೊಸ ಹೊಸ ಆವಿಷ್ಕಾರಗಳು ಬಂದಿವೆ. ಸರ್ಕಾರ ಈ ದಿಸೆಯಲ್ಲಿ ಮೀನುಗಾರರಿಗೆ ಪ್ರೋತ್ಸಾಹ ನೀಡಿದರೆ ಮೀನಿನ ಉತ್ಪಾದನೆಯ ಹೆಚ್ಚಳದೊಂದಿಗೆ ಈ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ಮೀನುಗಾರಿಕೆ ಸಚಿವರ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ಸೇಫ್ ಸ್ಟಾರ್ ಸಂಸ್ಥೆ ಅಧ್ಯಕ್ಷ ಜಿ. ಜಿ. ಶಂಕರ್ ಮಾತನಾಡಿ ಜೈನ ಜಟಕೇಶ್ವರ ಯುವಕ ಸಮಿತಿ ಪದಾಧಿಕಾರಿಗಳ ವಿವಿಧ ಸಮಾಜ ಮುಖಿಕಾರ್ಯಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪರಂಪರಾಗತ ಮೀನುಗಾರರ ನೆಲೆ ಕಾಸರಕೋಡ ಟೊಂಕದ ಸುಂದರ ನೈಸರ್ಗಿಕ ಕಡಲತೀರದಲ್ಲಿನ ನಿವಾಸಿಗಳ ಮೇಲೆ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ತೂಗುಗತ್ತಿ ನೇತಾಡುತ್ತಿದೆ. ಇಲ್ಲಿನ ಮೀನುಗಾರರು ಕಳೆದ ಹತ್ತು ವರ್ಷಗಳಿಂದ ನೆಮ್ಮದಿಯನ್ನು ಕಳೆದುಕೊಂಡು ಭಯದಲ್ಲೇ ಬದುಕುತ್ತಿರುವ ವಿದ್ಯಮಾನವನ್ನು ಪ್ರಸ್ತಾಪಿಸಿ ಕಪ್ಪೆಯೊಂದು ಘಟಸರ್ಪದ ಆಸರೆ ಪಡೆದ ಕಥೆಗೆ ಹೋಲಿಸಿ ಬಂದರು ವಿಚಾರದಲ್ಲಿ ಪಟ್ಟ ಭದ್ರರು ಇಲ್ಲಿನ ವರೆಗೆ ಜನಹಿತವನ್ನು ಕಡೆಗಣಿಸಿರುವದಕ್ಕೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮುಂದುವರಿದು ಈಗ ಮೀನುಗಾರ ಸಮುದಾಯದ ಮಂಕಾಳು ವೈದ್ಯರೇ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾಗಿರುವದರಿಂದ ಅವರು ಇಲ್ಲಿಯ ಮೀನುಗಾರರ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವರೆಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಗಣಪಯ್ಯ ಕನ್ಯಾ ಗೌಡ, ಗ್ರಾ. ಪಂ. ಸದಸ್ಯ ಜಗದೀಶ್ ತಾಂಡೇಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಯುವಕ ಸಮಿತಿಯ ಗೌರವಾಧ್ಯಕ್ಷ ರಮೇಶ ತಾಂಡೇಲ್, ಉಪಾಧ್ಯಕ್ಷ ಮಹೇಶ ತಾಂಡೇಲ್, ಕಾರ್ಯದರ್ಶಿ ಪಿತಾಂಬರ ತಾಂಡೇಲ್ ಗಿರೀಶ ತಾಂಡೇಲ್. ಡಾ.ಪ್ರಕಾಶ ಮೇಸ್ತ, ವಾಡೆಯ ಅಧ್ಯಕ್ಷ ರಾಜೇಶ್ ತಾಂಡೇಲ್,ಇನ್ನು ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಜೈನಜಟಗೇಶ್ವರ ಯುವಕ ಸಮಿತಿಯ ಅಧ್ಯಕ್ಷ ಭಾಸ್ಕರ ತಾಂಡೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ರಮೇಶ ಎಂ. ತಾಂಡೇಲ್ ವಂದಿಸಿದರು.ಗಾಯಕ ಮಹೇಶ್ ಆಚಾರ್ಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನ್ರತ್ಯ ಮತ್ತು ಯುವಜನರಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ಸಂಕ್ರಾಂತಿ ಹಬ್ಬದ ನಿಮಿತ್ತ ಮುಂಜಾನೆಯಿಂದ ಟೊಂಕದ ಜೈನ ಜಟಗೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಮೀತಿಯ ಆಶ್ರಯದಲ್ಲಿ ನಡೆದವು.