ಕಾರವಾರ: ಇಲ್ಲಿನ ನಂದನಗದ್ದಾದ ತೇಲಂಗ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಮಕ್ಕಳು, ಯುವಕರಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಗಜಾನನ ಯೂಥ್ ಕ್ಲಬ್ ನೇತೃತ್ವದಲ್ಲಿ ಆಯೋಜಿಸಿದ್ದ ಮೂರನೆ ವರ್ಷದ ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಕ್ಕಳು, ಯುವಕರು, ವೃದ್ಧರು ಎಂಬ ವಯಸ್ಸಿನ ಭೇದವಿಲ್ಲದೆ ಹಲವಾರು ಬಗೆಯ, ಹಲವು ಬಣ್ಣದ ಗಾಳಿಪಟಗಳನ್ನು ಹಾರಿಸಿ ಖುಷಿಪಟ್ಟರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ ಸ್ಪರ್ಧೆಗೆ ಚಾಲನೆ ನೀಡಿದ್ದರು. ‘ಎಲ್ಲರನ್ನೂ ಒಗ್ಗೂಡಿಸುವುದೇ ಹಬ್ಬಗಳ ಆಚರಣೆಯ ಮಹತ್ವ. ಇಂತಹ ಸಂದರ್ಭದಲ್ಲಿ ಹೊಸ ಮಾದರಿಯ ಸ್ಪರ್ಧೆಯ ಮೂಲಕ ಯುವಕರೆಲ್ಲ ಒಂದೆಡೆ ಸೇರುವುದು ಮಾದರಿ’ ಎಂದರು. ಗಜಾನನ ಯೂಥ್ ಕ್ಲಬ್ನ ಸಿದ್ದೇಶ ಬಾಂದೇಕರ, ಆಕಾಶ ನಾಯ್ಕ, ಅಮೇಯ ನಾಯ್ಕ, ಪ್ರಜ್ವಲ್ ಬಾಂದೇಕರ, ಆದರ್ಶ ನಾಯ್ಕ, ಸಚಿನ್ ಶೇಣ್ವಿ, ಇತರರು ಪಾಲ್ಗೊಂಡಿದ್ದರು.