ಸಾಗರ: ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ಸಂಗೀತ ಸುಧೆಯನ್ನು ಹರಿಸುತ್ತ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದ ಸಾಗರದ ಶ್ರೀ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ 24ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ.
ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಕಲ್ಚರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಕಾರದಲ್ಲಿ ವೇದನಾದ ಪ್ರತಿಷ್ಠಾನ ಸಾಗರ ಇದರ ಶ್ರೀ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ‘ಚತುರ್ವಿಂಶಃ ರಾಷ್ಟ್ರೀಯ ಸಂಗೀತೋತ್ಸವ’ವು ಜ.13,14,15ರಂದು ಸಾಗರದ ಗಾಂಧೀ ಮೈದಾನದಲ್ಲಿ ಆಯೋಜನೆಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ಹಾಗೆಯೇ ನಾಡಿನ,ದೇಶದ ಹಲವಾರು ಹೆಸರಾಂತ ಕಲಾವಿದರು ಭಾಗವಹಿಸಲಿದ್ದು, ಜ.13 ರಂದು ಮಧ್ಯಾಹ್ನ 12 ಗಂಟೆಯಿಂದ ಶಿರಸಿಯ ಸ್ಮಿತಾ ಹೆಗಡೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ತಬಲಾದಲ್ಲಿ ಮಂಜುನಾಥ್ ಮೋಟಿನ್ಸರ, ಸಂವಾದಿನಿಯಲ್ಲಿ ಸಂವತ್ಸರ ಸಾಗರ ಸಾಥ್ ನೀಡಲಿದ್ದಾರೆ. ಅಂದು ಸಂಜೆ 5.30ಕ್ಕೆ ನರಹರಿ ಸದ್ಗುರು ಆಶ್ರಮದ ಪ.ಪೂ.ಡಾ.ವೈ. ರಾಜಾರಾಮ್ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಘಾಟಕರಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅಬಸೆ ದಿನೇಶಕುಮಾರ್ ಜೋಷಿ, ಕೆ.ಎಚ್.ಸುಧೀಂದ್ರ, ಮಧುಕರ ಹೆಗಡೆ ಭಾಗವಹಿಸಲಿದ್ದು, ಹೆಚ್.ಕೆ.ವೆಂಕಟೇಶ ಹುಲಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ 6.30ರಿಂದ ನಡೆಯುವ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಭಕ್ತಿ ಸಂಗೀತದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ವಿ.ಚೈತ್ರಾ ಹೆಚ್.ಜಿ. ಭಾಗವಹಿಸಲಿದ್ದು, ಸಂವಾದಿನಿಯಲ್ಲಿ ಉಮಾಕಾಂತ್ ಪುರಾಣಿಕ್ ಬೆಂಗಳೂರು, ತಬಲಾದಲ್ಲಿ ಗೋಪಿನಾಥ್ ಎಚ್.ಎಸ್. ಸಹಕರಿಸಲಿದ್ದಾರೆ. ಮೊದಲನೇ ದಿನದ ಕೊನೆಯ ಕಾರ್ಯಕ್ರಮವಾಗಿ ರಾತ್ರಿ 9.30ರಿಂದ ಹಿಂದೂಸ್ತಾನಿ ಸಿತಾರ್ ವಾದನ ನಡೆಯಲಿದ್ದು, ಉಸ್ತಾದ್ ಶಫೀಕ್ ಖಾನ್ ಧಾರವಾಡ ಹಾಗೂ ತಬಲಾದಲ್ಲಿ ಶೌರಿ ಶಾನಭಾಗ ಭಾಗವಹಿಸಲಿದ್ದಾರೆ.
ಜ.14,ರಂದು ಮಧ್ಯಾಹ್ನ 12 ಗಂಟೆಯಿಂದ ‘ಸುಗಮ ಸಂಗೀತದ ಗೀತ ಪ್ರಕಾರಗಳು’ ಸಂಗೀತ ಪ್ರಾತ್ಯಕ್ಷಿಕೆಯನ್ನು ಪಂ.ಮೋಹನ ಹೆಗಡೆ ಹುಣಸೇಕೊಪ್ಪ ನಡೆಸಿಕೊಡಲಿದ್ದಾರೆ. ಸಂಜೆ 6.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚಿಲ್ಕುಂದ ಸಿಸ್ಟರ್ಸ್, ವಿ. ಲಕ್ಷ್ಮಿ ನಾಗರಾಜ್ ಬೆಂಗಳೂರು, ವಿ.ಇಂದು ನಾಗರಾಜ್ ಬೆಂಗಳೂರು ಇವರು ನಡೆಸಿಕೊಡಲಿದ್ದು, ವಯೋಲಿನ್‌ನಲ್ಲಿ ವಿ.ಎಸ್.ಜನಾರ್ಧನ್, ಮೃದಂಗದಲ್ಲಿ ವಿ.ಪುತ್ತೂರು ನಿಕ್ಷಿತ್, ಘಟಂನಲ್ಲಿ ವಿ. ಶ್ರೀನಿಧಿ ಕೌಂಡಿನ್ಯ ಸಹಕರಿಸಲಿದ್ದಾರೆ. ರಾತ್ರಿ 9 ರಿಂದ ನಡೆಯುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಗುರುಗಳಾದ ವಿ.ವಸುಧಾ ಶರ್ಮಾ ಇವರ ಹಿಂದೂಸ್ತಾನಿ ಗಾಯನದಲ್ಲಿ ಸಂವಾದಿನಿಯಲ್ಲಿ ನೀತಾ ಅಜಯ್ ಬೆಂಗಳೂರು, ತಬಲಾದಲ್ಲಿ ಗುರುರಾಜ ಆಡುಕಳಾ ಸಾಥ್ ನೀಡಲಿದ್ದಾರೆ.
ಜ.15 ರಂದು ಮಧ್ಯಾಹ್ನ 12 ಗಂಟೆಯಿಂದ ಕು.ಶ್ರೇಯಾ ಗೋಣುಗುಂಟಾ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಸಿಕೊಡಲಿದ್ದು, ತಬಲಾದಲ್ಲಿ ಸಂತೋಷ್ ಹೆಗಡೆ ಬೆಂಗಳೂರು, ಸಂವಾದಿನಿಯಲ್ಲಿ ಸತೀಶ್ ಭಟ್ ಯಲ್ಲಾಪುರ ಸಾಥ್ ನೀಡಲಿದ್ದಾರೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ನುಡಿಯನ್ನು ಸಾಹಿತಿ ಡಾ.ಗಜಾನನ ಶರ್ಮಾ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಬಲಾ ವಾದಕ ಪಂ.ಮೋಹನ ಹೆಗಡೆ ಹುಣಸೆಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಎನ್. ಛಲವಾದಿ, ಸಹಾಯಕ ನಿರ್ದೇಶಕ ಉಮೇಶ್ ಎಚ್., ಮಾಜಿ ಶಾಸಕ ಹಾಲಪ್ಪ ಹರತಾಳು, ನಗರಸಭೆ ಆಯುಕ್ತ ಹೆಚ್.ಕೆ.ನಾಗಪ್ಪ ಆಗಮಿಸಲಿದ್ದು, ವೇದನಾದ ಪ್ರತಿಷ್ಠಾನ ಅಧ್ಯಕ್ಷ ಹೆಚ್.ಕೆ. ವೆಂಕಟೇಶ ಹುಲಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಂವಾದಿನಿ ಸೋಲೋ ಕಾರ್ಯಕ್ರಮದಲ್ಲಿ ಪಂ.ಸುಧೀರ್ ನಾಯಕ್ ಕಾಣಿಸಿಕೊಳ್ಳಲಿದ್ದು, ತಬಲಾದಲ್ಲಿ ಡಾ.ಉದಯ ಕುಲಕರ್ಣಿ ಗೋವಾ ಸಹಕರಿಸಲಿದ್ದಾರೆ. ರಾತ್ರಿ 9.30ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಪಂ. ರಘುನಂದನ ಪಣ್ಶೀಕರ್ ಪುಣೆ, ಸಹ ಕಲಾವಿದರಾಗಿ ಸಂವಾದಿನಿಯಲ್ಲಿ ಪಂ.ಸುಧೀರ್ ನಾಯಕ್ ಮುಂಬೈ, ತಬಲಾದಲ್ಲಿ ಪಂ.ಗುರುಮೂರ್ತಿ ವೈದ್ಯ ಭಾಗವಹಿಸಲಿದ್ದಾರೆ.
ರಾಮನಾಮ ಸ್ಮರಣೆ:
ಜ.22ರಂದು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಶ್ರೀರಾಮ ಮಂದಿರ, ಹಾಗೂ ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜ.15 ಸಂಜೆ 4.30 ರಿಂದ ‘ರಾಮನಾಮ ಸ್ಮರಣೆ’ ವಿಶೇಷ ಸೇವಾ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಗೀತಾಸಕ್ತರು, ಶ್ರೀರಾಮ ಭಕ್ತರು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿ, ಪ್ರೋತ್ಸಾಹಿಸಲು ಸಂಗೀತ ವಿದ್ಯಾಲಯದ ಪ್ರಾಧ್ಯಾಪಕಿ ವಿ.ವಸುಧಾ ಶರ್ಮಾ ವಿನಂತಿಸಿದ್ದಾರೆ.