ದಾಂಡೇಲಿ: ನಗರದ ಹಳೆ ದಾಂಡೇಲಿಯ ಹದಗೆಟ್ಟಿರುವ ರಸ್ತೆ ದುರಸ್ತಿಗಾಗಿ ಸ್ಥಳೀಯ ಸಾರ್ವಜನಿಕರು ಪಟೇಲ್ ವೃತ್ತದ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪೈಪ್ ಲೈನ್ ಅಳವಡಿಕೆಗಾಗಿ ಮತ್ತು ಯುಜಿಡಿ ಕಾಮಗಾರಿಗಾಗಿ ಹಳೆ ದಾಂಡೇಲಿಯಲ್ಲಿ ರಸ್ತೆ ಅಗೆದು, ಮುಚ್ಚಲಾಗಿದ್ದರೂ, ರಸ್ತೆ ದುರಸ್ತಿ ಮಾಡದಿರುವುದರಿಂದ ರಸ್ತೆಯಿಡಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುವಂತಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಹಳೆ ದಾಂಡೇಲಿ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಿಕೊಡುವಂತೆ ಆಗ್ರಹಿಸಿ, ಸ್ಥಳೀಯ ಸಾರ್ವಜನಿಕರು ಪಟೇಲ್ ವೃತ್ತದ ಹತ್ತಿರ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು.
ಸ್ಥಳಕ್ಕೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸತೀಶ್ ಜಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುಧಾಕರ ಕಟ್ಟಿಮನಿ ಭೇಟಿ ನೀಡಿ, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು ಇಬ್ಬರೂ ಅಧಿಕಾರಿಗಳನ್ನು ಪಟೇಲ್ ವೃತ್ತದಿಂದ ಹಳೆ ದಾಂಡೇಲಿಯವರೆಗೆ ನಡೆಯುತ್ತಲೇ ಕರೆದುಕೊಂಡು ಹೋಗಿ ರಸ್ತೆ ಸಮಸ್ಯೆಯನ್ನು ಪ್ರತ್ಯಕ್ಷ ವಿವರಿಸಿದರು. ರಸ್ತೆ ದುರಸ್ತಿಗೆ ಅತಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸ್ಥಳೀಯ ಪ್ರಮುಖರುಗಳಾದ ಅನ್ವರ್ ಪಠಾಣ್, ವಿಷ್ಣು ಕಾಮತ್, ರಾಜು ಕೋಡ್ಕಣಿ, ವಿನೋದ್ ಬಾಂದೇಕರ್, ಸರ್ಪರಾಜ್ ಮುಲ್ಲಾ, ಆರೀಪ್ ಖಾಜಿ, ತೌಫೀಕ್ ಸೈಯದ್, ಶಾಂತ್ ಮಹಾಲೆ, ಶ್ಯಾಂ ಬೆಂಗಳೂರು, ಸಲೀಂ ಸೈಯದ್, ಇಲಿಯಾಸ್ ಐನಾಪುರ, ಗಣಪತಿ ನಾಯ್ಕ, ಜಾನ್ ಡಿಸಿಲ್ವಾ ಮೊದಲಾದವರು ಸೇರಿದಂತೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ತಹಶೀಲ್ದಾರ್ ಶೈಲೇಶ್ ಪರಮಾನಂದ, ಸಿಪಿಐ ಭೀಮಣ್ಣ.ಎಂ.ಸೂರಿ ಹಾಗೂ ಪಿಎಸ್ಐ ಯಲ್ಲಪ್ಪ.ಎಸ್ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದರು.