ಶಿರಸಿ: ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಸರ್ಕಾರದ ನಡೆಯನ್ನು ವಿರೋಧಿಸಿ, ನಾನು ಹಿಂದೂ ಕಾರ್ಯಕರ್ತ ನನ್ನನ್ನು ಬಂಧಿಸಿ ಎಂದು ಹಿಂದೂ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 20 ಕ್ಕೂ ಅಧಿಕ ಕಾರ್ಯಕರ್ತರು ನಗರದ ಡಿ.ವೈ.ಎಸ್.ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಅನಂತಮೂರ್ತಿ ಹೆಗಡೆ ಮಾತನಾಡಿ, ಕಳೆ್ ಕೆಲವು ದಿನಗಳ ಹಿಂದೆ ಹಿಂದೂ ಕಾರ್ಯಕರ್ತ ಲ, ಕರಸೇವಕನಾದ ಶ್ರೀಕಾಂತ ಪೂಜಾರಿಯನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಏಕಾಏಕಿ ಬಂಧಿಸಿರುವುದು ಖಂಡನೀಯ. 30 ವರ್ಷಗಳ ಹಿಂದಿನ ಪ್ರಕರಣಗಳಲ್ಲಿ ಇದೀಗ ಅವರನ್ನು ಬಂಧಿಸಿರುವುದರ ಹಿಂದೆ ಕಾಣದ ಕೈಗಳ ರಾಜಕೀಯ ಎದ್ದು ಕಾಣುತ್ತದೆ. ಹಿಂದೂಸ್ತಾನದಲ್ಲಿ ಹಿಂದೂ ಕಾರ್ಯಕರ್ತರಿಗೆ ಇಂತಹ ಸ್ಥಿತಿ ಬಂದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಕಾಂತ ಪೂಜಾರಿ ಮೇಲಿನ ಪ್ರಕರಣಗಳನ್ನು ಕೈ ಬಿಡಬೇಕು ಮತ್ತು ಸಮಸ್ತ ಹಿಂದೂಗಳಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ನಮ್ಮ ಹಿರಿಯರ ತ್ಯಾಗ, ಬಲಿದಾನ, 500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯಾದಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಸ್ವಾಭಿಮಾನಿ ಹಿಂದೂಗಳ ದಶಕಗಳ ಕನಸು ಇಂದು ನನಸಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಅಯೋಧ್ಯಾ ಶ್ರೀರಾಮ ಮಂದಿರದ ಉದ್ಘಾಟನೆ ಜ.22 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ, ಅಕ್ಷತೆ ನೀಡಿ, ಆಹ್ವಾನ ನೀಡುತ್ತಿದ್ದಾರೆ. ಇದನ್ನು ಸಹಿಸಲಾಗದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದೆ. ಕೂಡಲೇ ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಉಮೇಶ ಹರಿಕಾಂತ, ಸಂತೋಷ ನಾಯ್ಕ ಬ್ಯಾಗದ್ದೆ, ಕೇಮು ವಂದಿಗೆ, ಅಹೀಶ ಸೇರಿದಂತೆ ಇನ್ನಿತರರು ಇದ್ದರು.