ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ ಮತ್ತು ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶಾಲೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಆನಂತರ ಕಚೇರಿ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ ಗೋಡ್ರೇಜ್ ಕಬಾಟಿನ ಬೀಗ ಒಡೆದು ಸರಿಸುಮಾರು 5 ರಿಂದ 7 ಸಾವಿರ ರೂಪಾಯಿ ನಗದನ್ನು ಕಳ್ಳತನ ಮಾಡಿದ್ದಾರೆ.
ನಗರದ ಇ.ಎಂ.ಎಸ್ ಶಾಲೆಯಲ್ಲಿಯೂ ಕಳ್ಳತನ ನಡೆದಿದ್ದು, ಮುಖ್ಯೋಪಾಧ್ಯಯಿನಿಯರ ಕೊಠಡಿಯ ಬೀಗ ಮುರಿದು, ಗೋದ್ರೇಜ್ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿಟ್ಟಿದ್ದ ಶಾಲಾ ದಾಖಲಾತಿಗಳನ್ನು ಹೊರ ಚೆಲ್ಲಿದ್ದಾರೆ. ಇಲ್ಲಿ ನಗದು ಕಳ್ಳತನ ಮಾಡಿರುವುದರ ಬಗ್ಗೆ ಮಾಹಿತಿ ಬರಬೇಕಾಗಿದೆ. ಕಳ್ಳತನ ನಡೆದ ಎರಡು ಶಾಲೆಗಳಿಗೆ ಪಿಎಸ್ಐ ಐ.ಆರ್.ಗಡ್ಡೇಕರ್ ಮತ್ತು ತನಿಖಾ ವಿಭಾಗದ ಪಿಎಸ್ಐ ಯಲ್ಲಪ್ಪ.ಎಸ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.