ಶಿರಸಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಹಾಗೂ ಪ್ರಭು ಶ್ರೀರಾಮನ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸನಾತನ ಹಿಂದೂ ಧರ್ಮದ ಹೆಮ್ಮೆಯ ಕ್ಷಣ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಸೋಮವಾರ ನಗರದ ವಿನಾಯಕ ಕಾಲೋನಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮನೆಮನೆಗೆ ರಾಮಾಕ್ಷತೆ ನೀಡುವ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ 500ವರ್ಷದಲ್ಲಿ ನಮ್ಮ ಹಿರಿಯರು ತ್ಯಾಗ ಬಲಿದಾನ, ಹೋರಾಟ ಪರಿಣಾಮ ರಾಮಮಂದಿರ ಆಗುವುದಕ್ಕೆ ಸಾಧ್ಯವಾಗಿದೆ. ರಾಮಮಂದಿರ ಹಿಂದೂತ್ವದ ಪ್ರತೀಕ. ಹಿಂದೂಧರ್ಮದ ರಕ್ಷಕರಾದ ನಾವೆಲ್ಲಾ ನಮ್ಮ ಸಂಸ್ಕೃತಿ, ಧರ್ಮವನ್ನು ಮುಂದಿನ ಜನಾಂಗಕ್ಕೆ ಸಾರುವ ಸಮರ್ಥ ಜವಾಬ್ದಾರಿಯನ್ನು ತೋರಬೇಕು ಎಂದರು.ರಾಮ ಮಂದಿರ ನಿರ್ಮಾಣಕ್ಕೆ ನಿಧಿ, ಇಟ್ಟಿಗೆ ಸಂಗ್ರಹದಲ್ಲಿ ಎಲ್ಲರನ್ನು ತೊಡಗಿಸಿಕೊಂಡಿದ್ದೇವೆ. ಅದೇ ರೀತಿ ರಾಮಮಂದಿರ ನಿರ್ಮಾಣವಾದ ಸಂದರ್ಭದಲ್ಲಿ ಅವರನ್ನೆಲ್ಲಾ ಮನೆಮನೆಗೆ ತೆರಳಿ ಕರೆಯುವ ಜವಾಬ್ದಾರಿ ನಮ್ಮದು. ರಾಮಭಕ್ತರೆಲ್ಲ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸೋಣ ಎಂದರು.
ಸನಾತನ ಧರ್ಮವನ್ನು, ನಮ್ಮತನವನ್ನು ಜಾಗೃತಿಗೊಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮರ್ಥ ನೇತೃತ್ವ ನೀಡಿದ್ದಾರೆ. ರಾಮಮಂದಿರ ನಿರ್ಮಾಣ ಜತೆಯಲ್ಲಿ ಅಯೋಧ್ಯೆಯ ಅಭಿವೃದ್ಧಿಗೂ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಒಟ್ಟಾರೆ ದೇಶದ ಭಕ್ತಿ ಕೇಂದ್ರಗಳು ಪ್ರೇರಣೆಯ ಕೇಂದ್ರಗಳೂ ಆಗುತ್ತಿವೆ ಎಂದರು.
ರಾಮಮಂದಿರ ಉದ್ಘಾಟನೆಯ ದಿನ ಬೆಳಗ್ಗೆ ದೇವಾಲಯಗಳಲ್ಲಿ 9.30ರಿಂದ ಪೂಜೆ, ಭಜನೆ ನಡೆದು ರಾಮ ಪ್ರತಿಷ್ಠೆಯ ಕ್ಷಣವನ್ನು ಅಲ್ಲಿಯೇ ನೊಡುವ ಅವಕಾಶ ಆಗಬೇಕು ಎಂದು ಬಯಸಲಾಗಿದೆ. ಸಂಜೆ ಮನೆಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಮುಖ ಗಂಗಾಧರ ಹೆಗಡೆ ಮಾತನಾಡಿ, ಹದಿನೈದು ದಿನಗಳ ಕಾಲ ನಡೆಯುವ ರಾಮಾಕ್ಷತೆ ಅಭಿಯಾನ ಹಿಂದೂ ಸಮಾಜವನ್ನು ಜಾಗೃತಗೊಳಿಸುವ, ರಾಷ್ಟ್ರವನ್ನು ಒಂದೂಗೂಡಿಸುವ ಅಭಿಯಾನವಾಗಿದೆ. ಸುಮಾರು ಆರೂವರೆ ಲಕ್ಷ ಹಳ್ಳಿಗಳ ಮನೆಮನೆಗೂ ಈ ಅಭಿಯಾನ ತಲುಪಲಿದೆ ಎಂದರು.
ಅಭಿಯಾನದ ಪ್ರಮುಖರಾದ ಗೋಪಾಲ ಹೆಗಡೆ, ಸತ್ಯನಾರಾಯಣ ಭಟ್ಟ, ದೀಪಕ ಕಾಮತ್, ಕೇಶವ ದೊಂಬೆ, ನಿತೀನ ರಾಯಕರ್, ಲತಾ ಶೆಟ್ಟಿ, ಗೋಪಿ ಶೆಟ್ಟಿ ಉದಯ ಕಳೂರು, ಆನಂದ ಸಾಲೇರ್ ಮುಂತಾದವರು ಪಾಲ್ಗೊಂಡಿದ್ದರು.