ಭಟ್ಕಳ: ಬೆಳಕೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಮುಂದೊಂದು ದಿನ ಪ್ರಸಿದ್ಧ ಕ್ಷೇತ್ರವಾಗಲಿದೆ. ದೇವಸ್ಥಾನದ ಅಭಿವೃದ್ಧಿಗೆ ಸ್ಥಳೀಯರ ಸೇರಿದಂತೆ ಎಲ್ಲರ ಸಹಕಾರ ಪಡೆಯಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಹೇಳಿದರು.
ಅವರು ತಾಲ್ಲೂಕಿನ ಬೆಳಕೆಯ ಅಖಿಲ ಹವ್ಯಕ ಸಭಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಬೆಳಕೆ ಎನ್ನುವ ಊರಿನ ಪದವೇ ವಿಶಿಷ್ಟವಾಗಿದೆ. ಇದು ಸದಾ ಬೆಳಕೇ ಕೊಡುವ ಕ್ಷೇತ್ರವಾಗಲಿದೆ. ಹವ್ಯಕ ಮಹಾಸಭಾಕ್ಕೆ ಗುರುಪೀಠದ ಮೂಲಕ ಈ ಕ್ಷೇತ್ರ ಸಿಕ್ಕಿದೆ. ಇದರಿಂದ ಈ ಕ್ಷೇತ್ರಕ್ಕೂ, ಪೀಠಕ್ಕೂ ಅವಿನಾಭಾವ ಸಂಬಂಧ ಹೊಂದಿದಂತಾಗಿದೆ. ಕ್ಷೇತ್ರಕ್ಕೆ ಗುರುಪೀಠ ಬಂದಿದ್ದರಿಂದ ಭಕ್ತರಿಗೆ ಗುರು ಮತ್ತು ದೇವಿಯ ದರ್ಶನ ಭಾಗ್ಯ ಸಿಕ್ಕಿದೆ. ಗುರುವಿನಲ್ಲಿ ಅರಿವು ಸಿಕ್ಕರೆ, ತಾಯಿಯಲ್ಲಿ ವಾತ್ಸಲ್ಯ ಸಿಕ್ಕಂತಾಗಿದೆ ಎಂದ ಶ್ರೀಗಳು ಕ್ಷೇತ್ರವನ್ನು ಎಲ್ಲರ ಸಹಾರದಿಂದ ಅಭಿವೃದ್ಧಿಗೊಳಿಸಬೇಕು. ಮಠದ ಭಕ್ತರು, ಸ್ಥಳೀಯರು ಈ ಕ್ಷೇತ್ರಕ್ಕೆ ಸದಾ ಭೇಟಿ ನೀಡುವಂತಾಗಬೇಕು ಎಂದರು.
ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಸ್ವಾಗತಿಸಿದರು. ಇದಕ್ಕೂ ಪೂರ್ವದಲ್ಲಿ ದೇವಸ್ಥಾನದಲ್ಲಿ ಹವ್ಯಕ ಮಹಾಸಭಾದಿಂದ ಸ್ವರ್ಣ ಪಾದುಕಾ ಭಿಕ್ಷಾಸೇವೆ ನಡೆಯಿತು. ಈ ಸಂದರ್ಭದಲ್ಲಿ ಹವ್ಯಕ ಮಹಾಸಭಾದ ಪದಾಧಿಕಾರಿಗಳು, ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ರೇಷ್ಮಾ ಭಟ್ಟ, ಪದಾಧಿಕಾರಿಗಳು, ಭವತಾರಿಣಿ ವಲಯದ ಪದಾಧಿಕಾರಿಗಳು, ಕಿತ್ರೆ ದೇವಿಮನೆ ಅಧ್ಯಕ್ಷ ಶಿವಾನಂದ ಹೆಬ್ಬಾರ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಪ್ರಮುಖರಾದ ಶ್ರೀನಿವಾಸ ಹೆಗಡೆ, ದತ್ತಾತ್ರಯ ಭಟ್ಟ, ಗಣೇಶ ಹೆಬ್ಬಾರ ಮೂಡ್ಲಿಕೇರಿ, ಗಣಪಯ್ಯ ಹೆಗಡೆ, ಬಾಲಕೃಷ್ಣ ಶಾಸ್ತ್ರಿ ಸೇರಿದಂತೆ ಹಲವು ಮುಖಂಡರಿದ್ದರು. ಸಂಜೆ ಶ್ರೀನಿವಾಸ ಪ್ರಭು ಮತ್ತು ಪ್ರಸಾದ ಭಟ್ಕಳ ತಂಡದವರಿಂದ ಶರಸೇತುಬಂಧನ ಯಕ್ಷಗಾನ ತಾಳಮದ್ದಲೆ ನಡೆಯಿತು.