ಸಿದ್ದಾಪುರ: ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಕಳೆದ ಮೂರು ದಶಕಗಳಿಂದ ಸೇವೆಸಲ್ಲಿಸುತ್ತಿರುವ ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ ಅವರಿಗೆ ಅವರ ಶಿಷ್ಯವೃಂದದವರಿಂದ ಹಾಗೂ ಅಭಿಮಾನಿಗಳಿಂದ ಡಿ.31 ರಂದು ಬೆಳಿಗ್ಗೆ 10 ರಿಂದ ‘ಮನಮೋಹನ’ ಸಂಗೀತ ಕಾರ್ಯಕ್ರಮ ಮತ್ತು ಸತ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಪಂ.ಮೋಹನ ಹೆಗಡೆ ಅವರು ಯಾವುದೇ ಪ್ರಚಾರ ಇಲ್ಲದೇ ಸಂಗೀತ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವುದಲ್ಲದೇ ರಾಜ್ಯದಾದ್ಯಂತ ಶಿಷ್ಯವೃಂದದವರನ್ನು ಹೊಂದಿದ್ದಾರೆ. ಸಂಗೀತದೊಂದಿಗೆ ಹೋಮಿಯೋಪತಿ ಔಷಧಿ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಅನೇಕ ಆಸಕ್ತರಿಗೆ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಸಂಗೀತ ತರಗತಿಯನ್ನು ನಡೆಸುತ್ತಿದ್ದರು ಎಂದು ಹೇಳಿದರು.
ಡಿ.31ರಂದು ಬೆಳಗ್ಗೆ 10 ರಿಂದ ಮನಮೋಹನ ಶಾಸ್ತ್ರೀಯ ಸಂಗೀತ ಸುಧೆ ನಡೆಯಲಿದ್ದು ಗಾಯನದಲ್ಲಿ ಶ್ರೀಪಾದ ಹೆಗಡೆ ಹಾಗೂ ಬಕುಳಾ ಹೆಗಡೆ ಸೋಮನಮನೆ ಇವರ ಜುಗಲ್ಬಂದಿ, ಕಿರಣ ಭಟ್ಟ ಕೆರೆಕೈ, ವಸುಧಾ ಶರ್ಮಾ ಸಾಗರ, ವಿನಾಯಕ ಹೆಗಡೆ ಹಿರೇಹದ್ದ, ರಾಜೇಂದ್ರ ಹೆಗಡೆ ಕೊಳಗಿ, ಸಂತೂರದಲ್ಲಿ ಚೈತನ್ಯ ಭಟ್ಟ ಕಲ್ಲಾಳ, ಶ್ರೀಧರ ಮತ್ತಿಘಟ್ಟ, ತಬಲಾ-ಸೋಲೋದಲ್ಲಿ ಅನಂತ ಹೆಗಡೆ ವಾಜಗಾರು, ಬಾನ್ಸುರಿ ವಾದನದಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ, ಕಿರಣ ಹೆಗಡೆ ಮಗೇಗಾರು,ತಬಲಾದಲ್ಲಿ ಪಂ.ಮೋಹನ ಹೆಗಡೆ ಹುಣಸೆಕೊಪ್ಪ, ಅನಂತ ಹೆಗಡೆ ವಾಜಗಾರು, ಪ್ರದೀಪ ಹೆಗಡೆ ಕೋಡ್ಸರ, ನಿತಿನ್ ಹೆಗಡೆ ಕಲಗದ್ದೆ, ಅರುಣ ಭಟ್ಟ ಕೆರೆಕೈ, ಸಂವಾದಿನಿಯಲ್ಲಿ ಡಾ.ಸಮೀರ ಭಾದ್ರಿ, ಅಜೇಯ ಹೆಗಡೆ ವರ್ಗಾಸರ ಪಾಲ್ಗೊಳ್ಳಿದ್ದಾರೆ. ಅನಂತ ಭಟ್ಟ ಹೆಗ್ಗಾರಳ್ಳಿ, ಜಯರಾಮ ಭಟ್ಟ ಹೆಗ್ಗಾರಳ್ಳಿ, ಚಿನ್ಮಯ ಭಟ್ಟ ಕಲ್ಲಾಳ, ಪ್ರಶಾಂತ ಹೆಗಡೆ ಮಗೇಗಾರು ಸಹಕರಿಸಲಿದ್ದಾರೆ.
ಸಂಜೆ 7 ರಿಂದ ವರಲಕ್ಷ್ಮಿ ಮತ್ತು ಪಂ.ಮೋಹನ ಹೆಗಡೆ ಹುಣಸೆಕೊಪ್ಪ ಇವರಿಗೆ ಸತ್ಕಾರ ಸಮಾರಂಭ ನಡೆಯಲಿದ್ದು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸುವರು. ಸುಬ್ರಾಯ ಮತ್ತಿಹಳ್ಳಿ ಅಭಿನಂದನಾ ನುಡಿಗಳನ್ನಾಡುವರು, ಪಂ.ಪ್ರಭಾಕರ ಭಟ್ಟ ಕೆರೇಕೈ, ಪಂ.ಎಂ.ಪಿ.ಹೆಗಡೆ ಪಡಿಗೆರೆ, ಆರ್.ಎಸ್.ಹೆಗಡೆ ಬೆಳ್ಳೆಕೇರಿ, ವೈ.ಎ.ದಂತಿ ಸಾಗರ, ಚಂದ್ರಶೇಖರ ಹೆಗಡೆ ಮಗೇಗಾರು, ಭಾಸ್ಕರ ಹೆಗಡೆ ಮುತ್ತಿಗೆ ಉಪಸ್ಥಿತರಿರುತ್ತಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಿರಣ ಹೆಗಡೆ ಮಗೇಗಾರು ಹಾಗೂ ರಾಜೇಂದ್ರ ಹೆಗಡೆ ಕೊಳಗಿ ಉಪಸ್ಥಿತರಿದ್ದರು.